Thursday, 2 May 2013

ಪರ್ವತಾರೋಹಣ - ಕುಮಾರ ಪರ್ವತ... (Trek To Kumar Parvata 19th & 20th Feb 2011)


ಕುಮಾರ ಪರ್ವತ :-

ಕುಮಾರ ಪರ್ವತ(KP)ವು ಕರ್ನಾಟಕದ ಸುಳ್ಯ ತಾಲೂಕಿನ, ಸುಬ್ರಮಣ್ಯ ಗ್ರಾಮದಲ್ಲಿ ನೆಲೆಸಿದ್ದು, ತನ್ನ ಅಪರಿಮಿತ ಪ್ರಕೃತಿ ಸೌಂದರ್ಯದಿಂದ ಟ್ರೆಕ್ಕೆರ್ ಗಳನ್ನು ಆಕರ್ಷಿಸುತ್ತಿದೆ. ಇಡೀ ಕರ್ನಾಟಕದಲ್ಲೇ ಟ್ರೆಕ್ಕಿಂಗ್ ಗೆ ಇದಕ್ಕೆ 3ನೇ ಸ್ಥಾನ( 1- ಮುಳ್ಳಯ್ಯನ ಗಿರಿ, ಚಿಕ್ಕಮಗಳೂರು, 2 - ತಡಿಯಾಂಡಮೋಲ್, ಕೊಡಗು). ಸುಬ್ರಮಣ್ಯನ ಶ್ರೀರಕ್ಷೆಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಈ ಕುಮಾರ ಪರ್ವತವು ಟ್ರೆಕ್ಕೆರ್ ಗಳ  ಸ್ವರ್ಗವೆಂದೇ ಹೇಳಬೇಕು.
1712 ಮೀ. ಎತ್ತರದ ಶಿಖರ ಬಿಂದುವನ್ನು ಮುಟ್ಟಲು ನಾವು 13 ಕಿ.ಮೀ. ಟ್ರೆಕ್ಕಿಂಗ್ ಮಾಡಬೇಕು (ಒಟ್ಟಾರೆ ಕ್ರಮಿಸುವ ದೂರ 26 ಕಿ.ಮೀ.).ಸೋಮವಾರ ಪೇಟೆಯ ಕಡೆಯಿಂದಲೂ ಟ್ರೆಕ್ಕಿಂಗ್ ಮಾಡಬಹುದಾಗಿದೆ.






ಶುಕ್ರವಾರ ರಾತ್ರಿ 11ಕ್ಕೆ ಬೆಂಗಳೂರಿಂದ ಕ್ವಾಲಿಸಲ್ಲಿ ಹೊರಟು ಬೆಳ್ಳಿಗ್ಗೆ ಸುಮಾರು 7ಕ್ಕೆ ಕುಕ್ಕೆ ಮುಟ್ಟಿದ್ವಿ... 
ಅಲ್ಲೇ ಒಂದೆರಡು ರೂಂ ತಗೊಂಡು ಸ್ನಾನ ಮಾಡಿ.. ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು,. ಒಂದು ಹೋಟೆಲಲ್ಲಿ ಬೆಳಗಿನ ಹೊಟ್ಟೆಗೆ ಪ್ರಸಾದ( ನಾಸ್ಟ/ತಿಂಡಿ) ತಿಂದು ಸ್ವಲ್ಪ ಸುತ್ತಾಡಿ.. ಟಟ್ರೆಕ್ಕಿಂಗ್ ಗೆ ಬೇಕಾಗಿರೋ ವಸ್ತುಗಳನ್ನೆಲ್ಲ ತಗೆದುಕೊಂಡು ಬೇಡವಾಗಿರೋದೆಲ್ಲ ಕ್ವಾಲಿಸಲ್ಲಿ ಇಟ್ಟು ಹೋಗೋಕೆ ರೆಡಿ ಆದ್ವಿ... 
ಎಲ್ಲರೂ ಅಂದುಕೊಂಡಂತೆ ತಮ್ಮ ತಮ್ಮ ಸಾಮಾನುಗಳನ್ನು ತಮ್ಮ ತಮ್ಮ ಹೆಗಲಿಗೆ ಬ್ಯಾಗಲ್ಲಿ ಹಾಕೊಂಡು ನಿಂತರು... 










ಗ್ಯಾಸ್ ಸಿಲಿಂಡರ್ ಡ್ರಾಮ:-
ನಾನು ಅಡುಗೆ ಮಾಡಲು ಬೇಕಾಗೋ ಪಾತ್ರೆ ತಗೆದುಕೊಂಡೆ ಮತ್ತು ವಿಜಯ್ ಗೆ ಹೇಳಿದೆ ನೀನು ಗ್ಯಾಸ್  ಸಿಲಿಂಡರ್ ತಗೋ ಅಂತ.. ಅವ್ನು ಸರಿ ಆಯಿತು ಮಗಾ ನಾನು ಸಿಲಿಂಡರ್ ತಗೋತೀನಿ ಅಂತ ಸಿಲಿಂಡರ್ ಹುಡುಕ್ತಾನೆ ಸಿಗ್ತಾನೆ ಇಲ್ಲ...!!!!!!
ಏನಿದು ಸಿಲಿಂಡರ್ ಏನಾದ್ರು ದಾರೀಲಿ ಬಿದ್ದೋಯ್ತ ಹೆಂಗೆ..?
ಎಲ್ಲರೂ ಹುಡುಕೋದಕ್ಕೆ ಶುರು ಮಾಡಿದ್ವಿ ಆದರೂ ಸಿಗ್ತಿಲ್ಲ.. ಕ್ವಾಲಿಸ್ ಫುಲ್ ಯೆತ್ತಾಕಿದ್ದಾಯ್ತು . ಇನ್ನೇನು ಕ್ವಾಲಿಸ್ನ ಸ್ಪೇರ್ ಪಾರ್ಟ್ಸ್ ನ ತಗೆದು ಹಾಕೊದೊಂದೇ ಬಾಕಿ ಇತ್ತು ನೋಡ್ರಿ ಅಸ್ಟೊಂದು ರೋಸಿ ಹೋಗಿದ್ರು ನಮ್ ಹುಡುಗ್ರು... ಅಷ್ಟರಲ್ಲೇ ನಮ್ಮ ಜೋತಿಗಿರೋನು ಯಾರೋ ಒಬ್ನು ಹಳಿದ ಲೋ ಬೆಂಗಳೂರಿಂದ ಸಿಲಿಂಡರ್ ತಗೊಂಡು ಬಂದಿದ್ವ ಅಂತ ಸರಿಯಾಗಿ ನೆನುಪು ಮಾಡ್ಕೊರ್ಲಾ... 
ಆವಾಗಲೇ ನಾವು ಸಿಲಿಂಡರ್ ಹುಡುಕೋ ಬೇರೆ ಲೋಕದಿಂದ ಭೂಮಿಗೆ ಬಂದಿದ್ದು.. ಹೌದಲ್ವ.. ಹಾಗೆ ಅಂಬಿ ಅವನ್ ರೋಮ್ಮೆಟ್ ಗೆ ಕಾಲ್ ಮಾಡಿ ಕೇಳಿದ... ಅವಾಗ ಗೊತ್ತಾಯ್ತು ನೋಡ್ರಿ ಏನಾಗಿದೆ ಅಂತ.. 
ರಾತ್ರಿ ಬೆಂಗಳೂರಿಂದ ಬರೋವಾಗ  ಸಿಲಿಂಡರನ್ನು ಅಲ್ಲೇ ರೂಂ ಮುಂದೆ ಇರೋ ಕಟ್ಟೆ ಮೇಲೆ ಇಟ್ಟು ಹಾಗೆ ಬಂದಿದ್ವಿ :) 
ಅಲ್ಲೇ ಬಿಟ್ಟು ಬಂದು ಕ್ವಾಲಿಸಲ್ಲಿ ಹುಡುಕಿದರೆ ಸಿಗುತ್ತಾ ಅವನೌನ್ ಅದು .. 
ಅದೇನೂ ಅಂತಾರಲ್ಲ ಮದುಮಗಳನ್ನ ಬಿಟ್ಟು ಮದುವೆಗೆ ಹೋಗಿ ತಾಳಿ ಕಟ್ಟೋ ಸಮಯದಲ್ಲಿ ನೆನುಪು ಮಾಡ್ಕೊಂಡ್ರಂತ ಹಂಗಾತು ನಮ್ಮ ಪಾಡು.. 

ರಾತ್ರಿ ಮತ್ತು ಮಾರನೆ ಬೆಳಿಗ್ಗೆ ಅಡುಗೆ ಮಾಡೋಕೆ ಬೇಕಾಗಿರೋ ಅಕ್ಕಿ (rice), ಮಸಾಲೆ ಪುಡಿ, ಹಾಲಿನ ಪೌಡರ್, ಕಾಫಿ ಪುಡಿ, ಮಾಗಿ ನೂಡಲ್ಸ್  ಇನ್ನೂ ಏನೇನು ಬೇಕು ಅದನ್ನೆಲ್ಲ ತಗೊಂಡಿದ್ವಿ ಆದ್ರ ಗ್ಯಾಸ್ ಸಿಲಿಂಡರ್ ಬಿಟ್ಟು.. 
ಇವಾಗ ಇನ್ನೇನು ಮಾಡೋದು ಬೆಂಗಳೂರಿಗೆ ಹೋಗಿ ಸಿಲಿಂಡರ್ ಅಂತು ತಗೊಂಡು ಬರೋದಕ ಆಗಾಂಗಿಲ್ಲ... 
ಅಲ್ಲೇ ಎಲ್ಲಾದರು ಅಂಗಡಿಗಳಲ್ಲಿ ಸೀಮೆ ಎಣ್ಣೆ ಸ್ಟೋವ್ ಏನಾದ್ರು ಸಿಗುತ್ತಾ ಅಂತು ಹುಡುಕಿದ್ವಿ ಏನ್ ಮಾಡ್ತೀರಿ ನಮ್ ಟೈಮ್ ಕಾ ಅಲ್ಲಿ ಅದು ಸಿಗ್ಲಿಲ್ಲ.. ಹೋಗ್ಲಿ ಬರೀ ಸೀಮೆ ಎಣ್ಣೆ ಆದರು ಸಿಗ್ತಾದ ಹೆಂಗೋ ಅಂತ ಹುಡುಕಿದ್ವಿ ಅದು ಇಲ್ಲ.. 
ಏನ್ರೋ  ಇಸ್ಟೊಂದು ಎಲ್ಲ ದೊಡ್ಡದಾಗಿ ಮಾಗಿ ಗೀಗಿ, ಮಸಾಲಾ ಪೌಡರ್ ಅದು ಇದು ಅಂತ ಏನೇನೊ ತಂದೀವಿ ಮತ್ತ ಹ್ಯಾಂಗ ಮಾಡಾದು ಇನ್ನ?
ಒಬ್ನಂದ ಇನ್ನೇನು ಮಾಡಾಕಾಯ್ತದ ಎಲ್ಲಾನು ಇಲ್ಲೇ ಕ್ವಾಲಿಸಲ್ಲಿಟ್ಟು ಹೋಗೋಣ ಅಸ್ಟೆ... 
ಅಸ್ಟರಲ್ಲಿ ಇನ್ನೊಬ್ಬ ಹೇಳಿದ ಏನ್ ಆಗ್ತದ ಆಗ್ಲಿ ಎಲ್ಲಾನು ತಗೊಂಡು ಹೋಗೋಣ ಅಲ್ಲೇ ಸೌದೆ ಸಿಕ್ಕೆ ಸಿಗುತ್ತೆ ಒಲೆ ಹೂಡಿ ಅಡುಗೆ ಮಾಡೋಣ.. ಇದಪ್ಪ ಓವರ್ ಕಾನ್ಫಿಡೆಂಟ್ ಅಂದ್ರ... 
ಎಲ್ಲರೂ ಏನ್ ಆಗ್ತದ ಆಗ್ಲಿ ನೋಡಿಯೇ ಬಿಡೋಣ ಅಂತ ರೆಡಿ ಆದ್ರು.. ಒಲೆ ಹೊತ್ತಿಸೊಕೆ ಅಂತ ಬೆಂಕಿ ಪೊಟ್ಟಣ ತಗೊಂಡ್ವಿ.. 
ಇಸ್ಟೆಲ್ಲಾ ಡ್ರಾಮಾ ಮುಗಿಯೋದ್ರೊಳಗೆ ಸಮಯ ಬೆಳಿಗ್ಗೆ ಸುಮಾರು 9:30 ಆಗಿತ್ತು.. 
ಅಂತು ಇಂತೂ ಟ್ರೆಕ್ಕಿಂಗ್ ಗೆ  ಬೇಕಾಗಿರೋ ವಸ್ತುಗಳನ್ನ ತಗೊಂಡು ಅನಾವಶ್ಯಕ ವಸ್ತುಗಳನ್ನ ಅಲ್ಲೇ ಕ್ವಾಲಿಸಲ್ಲಿ ಇಟ್ಟು ಬೆಳಿಗ್ಗೆ ಅಂದರೆ 9:45 ಕ್ಕೆ ಟ್ರೆಕ್ಕಿಂಗ್ ಶುರು ಮಾಡಿದ್ವಿ... 

ಟ್ರೆಕ್ಕಿಂಗ್ ವಿವರ:-


1 ನೇ ದಿನ:-
ಕುಕ್ಕೆ ಇಂದ ಸುಮಾರು 500 ಇಂದ 600 ಮೀಟರ್ ದೂರ ರಸ್ತೇಲಿ ಹೋದರೆ ಅಲ್ಲಿ ಒಂದು ನಾಮಪಲಕ (board) ಕಾಣಿಸುತ್ತದೆ.. ಕುಮಾರ ಪರ್ವತಕ್ಕೆ ಹೋಗುವ ಮಾರ್ಗ.... 
ಅದನ್ನ ನೋಡಿ ಎಲ್ಲರಿಗೂ ಎಲ್ಲಿಲ್ಲದ ಹುಮ್ಮಸ್ಸೋ ಹುಮ್ಮಸ್ಸು...




ಅದು ಸ್ವಲ್ಪ ದಟ್ಟವಾದ ಅರಣ್ಯ ಪ್ರದೆಶವಾದ್ರಿಂದ ಮತ್ತು 40 - 50 ಡಿಗ್ರಿ ವಾಲಿಕೊಂಡಿರೋ ದಾರೀಲಿ ನಡಿಬೇಕಾಗಿತ್ತು... ಹಂಗೆ ಸ್ವಲ್ಪ ಅಂದ್ರೆ ತುಂಬಾನೇ ಬ್ರೆಕ್ಸ್ ತಗೊಂಡು ಮುಂದೆ ಸಾಗಿದ್ವಿ.. ಮೊದಮೊದಲು ತುಂಬಾ ದಣಿವಾಗತೊಡಗಿತು.. ಆದರೆ ನಮ್ಮಲ್ಲಿರೋ ಕರ್ನಾಟಕದ ತುಂಬಾ ಕಷ್ಟಕರವಾದ ಟ್ರೆಕ್ಕಿಂಗ್ ಮಾಡಿಯೇ ತೀರಬೇಕು ಅನ್ನೋ ಮೊಂಡತನ ಅಂತಿರೋ ಅಥವಾ ಹಠ ಅಂತಿರೋ ಅಥವಾ ಹುಮ್ಮಸ್ಸು ಅಂತಿರೋ.. ಆ ದಣಿವು ನಮ್ಮನ್ನು ಅಸ್ಟೊಂದು ಕಾಡಲಿಲ್ಲ... 
ಹಾಗೆ ಅಲ್ಲಲ್ಲಿ ವಿಶ್ರಾಂತಿ ತಗೆದುಕೊಳ್ಳುತ,  ಜೀವನದಲ್ಲಿ ಏನೋ ಹೊಸದೊಂದು ಸಾಧಿಸುತ್ತಿದ್ದೇವೆ ಅನ್ನೋ ತೃಪ್ತಿ ಇನ್ನೊಂದು ಕಡೆ... ಅದೇ ಜಿಗಿದಾಟದಲ್ಲಿ ಫೋಟೋಸ್ ಗೆ ಪೋಸ್ ಕೊಡ್ತಾ ಇದ್ವಿ... ಅಣ್ಣರಾವ್ ಒಂದು ಹೆಜ್ಜೆ ಮುಂದೆ ಹೋಗಿ ಶಾರುಖ್ ಖಾನ್ ಹಾಗೆ ಪೋಸ್ ಕೊಡೋದ್ರಲ್ಲಿ ತುಂಬಾ ಬ್ಯುಸಿ ಆಗಿದ್ದ...




ನಮ್ಮ ಗುಂಪಿನ ಬಗ್ಗೆ ಒಂದು ಮಾತು ಹೇಳಲೇ ಬೇಕು.. ಗುಂಪಲ್ಲಿರೋ ಎಲ್ಲರೂ ಹೇಗಿದ್ದರೂ ಅಂದರೆ ಒಬ್ಬರಿಗೊಬ್ಬರು ಸಹಾಯ ಮಾಡೋದಾಗಲಿ, ಒಬ್ಬರಿಗೆ ದಣಿವಾದರೆ ಅವರ ಬ್ಯಾಗ್ ಸ್ವಲ್ಪ ಇವರು ತಗೊಂಡು ಅವರಿಗೆ ದಣಿವಾರಿಸಿಕೊಳ್ಳಲು ನೆರವಾಗುತ್ತಾರೆ . ಒಟ್ಟಿನಲ್ಲಿ ಹೇಳಬೇಕು ಅಂದ್ರೆ ಒಂದು ಅಪ್ಪಟ ಕುಚ್ಕು ಒಬ್ಬರಿಗೊಬ್ಬರ ಬಿಟ್ಟು ಕೊಡದ ಸ್ನೇಹಿತರಾಗಿದ್ದರು.... 

"ನಾವು ಫೆಬ್ರವರಿ ತಿಂಗಳಲ್ಲಿ ಹೋಗಿರೊದ್ರಿಂದ  ಜಿಗಣೆ(leech) ಕಾಟ ಇರ್ಲಿಲ್ಲ"  :)

ಹಾಗೆ ಹೀಗೆ ಅಂತ ದಾರೀಲಿ ಅಂತಾಕ್ಷರಿ ಆಟ ಆಡೋದಕ್ಕೆ ಶುರು ಮಾಡಿದ್ವಿ ಏನೋ ಗೊತ್ತಿಲ್ಲಾರೀ ಅದೊಂದು ಸೂಪರ್ ಗೇಮ್  ಅನಿಸ್ತು, ನಾವು ಎಷ್ಟು ದೂರ ಕ್ರಮಿಸುತ್ತಿದ್ದೇವೆ ಅಂತಾನೆ ಗೊತ್ತಾಗ್ಲಿಲ್ಲ... 
ಆ ದಟ್ಟವಾದ ಅರಣ್ಯ ಪ್ರದೇಶದಲ್ಲಿ ನಡಿಯುವಾಗ ಪ್ರಕೃತಿಯ ಸೌಂದರ್ಯದ ಮುಂದೆ ಎಲ್ಲಾನು ಸೋನ್ಯ ಅನಿಸ್ತಿತ್ತು... ಆ ದಟ್ಟ ಕಾಡಲ್ಲಿ ಚಿಕ್ಕದಾದ ಕಾಲು ದಾರೀಲಿ ನಡಿತಾ ಸಾಗುತಿರಬೇಕಾದ್ರೆ ಸೋರ್ಯಕಿರಣಗಳು ಮರಗಳ ಆ ಎಲೆಗಳ ಮಧ್ಯದಿಂದ ತೂರಿಕೊಂಡು ಯಾರಿಂದನೋ ತಪ್ಪಿಸಿಕೊಂಡು ಬಂದು ನಮ್ಮನ್ನೇ ಚುಂಬಿಸಲು ಹಾತೊರಿಯುತ್ತಿವೆಯೇನೋ ಅನಿಸುತ್ತೆ... ( ಬಾಳ್ ಹೊಗಳಾಕತ್ತೀನಿ ಅನ್ಸಾಕತ್ತಾದೆನ್ರೀ... ಜಾಸ್ತಿ ಅನಿಸಿದ್ರು ಆ ಪ್ರಕೃತಿಯ ಸೃಷ್ಟಿಯ ಮುಂದೆ ಎಲ್ಲಾನೂ ಸೊನ್ನೆ ಹೌದೊ ಅಲ್ವೋ ನೀವ ಹೇಳ್ರಲ್ಲ ಮತ್ತ..)
ಇಸ್ಟೆಲ್ಲಾ ನಡಿಯೋದ್ರೋಳ್ಗ ಟೈಮ್ ಮದ್ಯಾನ 12 ಆಗಿತ್ತು.. ಆವಾಗಲೇ ಸುಮಾರು 4  ರಿಂದ 5 km ಗುಡ್ಡ ಹತ್ತಿದ್ವಿ... ಎಲ್ಲರಿಗೂ ಭಟ್ಟರ ಮನೆ ನೆನುಪು ಮಾಡಿಕೊಳ್ಳೋದಕ್ಕೆ ಶುರು ಮಾಡಿದ್ರು.. 
ಏನಿದು ಈ ಭಟ್ಟರ ಮನೆ ಅಂತ ತಿಂಕ್ ಮಾಡಕತ್ತಿರೆನು.. ಹೇಳ್ತೀನಿ ಇರ್ರೀ.. 
ಭಟ್ಟರ ಮನೆ ಇರೋದು ಕುಕ್ಕೆ ಇಂದ ಸುಮಾರು 6km ದೂರದಲ್ಲಿದೆ... ಕುಮಾರ ಪರ್ವತದ ಹತ್ತೋವಾಗ ಮರ್ಗಮದ್ಯ ಸಿಗುತ್ತೇ.... ಏನಪಾ ಈ ಭಟ್ಟರ ಮನೆ ವಿಶೇಷತೆ ಅಂದರೆ.. ನೀವು ಕುಮಾರ ಪರ್ವತ ಹತ್ತಬೇಕಾದ್ರೆ ದಾರೀಲಿ ಎಲ್ಲೂ ನೀರು ಸಿಗೋದಿಲ್ಲ.. ಭಟ್ಟರ ಮನೆ ಹತ್ರಾನೆ ಸಿಗೋದು.. ಮತ್ತು ಈ ಭಟ್ಟರ ಮನೇಲಿ ಊಟ ಕೂಡ ಸಿಗುತ್ತೆ.. ಟ್ರೆಕ್ಕಿಂಗ್ ಬರೋರೆಲ್ಲ ಈ ಭಟ್ಟರ ಮನೆಗೆ ಬಂದು ಊಟ ಮಾಡಿಕೊಂಡು ಸ್ವಲ್ಪ ಸಮಯ ವಿಶ್ರಾಂತಿ ತಗೆದುಕೊಂಡು ಮತ್ತೆ ಮುಂದೆ ಸಾಗುತ್ತಾರೆ.... 
ಆದ್ದರಿಂದ ನಮಗೂ ಈ ಭಟ್ಟರ ಮನೆ ನೆನುಪು ಶುರುವಾಗಿತ್ತು.. ಹೊಟ್ಟೆ ಚುರುಗುಡೋಕ್ಕೆ ಚಾಲೂ ಮಾಡಿತ್ತು... ಯಾರಾದ್ರು ಟ್ರೆಕ್ಕಿಂಗ್ ಇಂದ ಬರ್ತಿರೋರಿಗೆ ಕೇಳಿದ್ರೆ ಭಟ್ಟರ ಮನೆ ಇರೋದು ಇನ್ನೇನು ಸ್ವಲ್ಪ ಮುಂದೆ ಹೋದರೆ ಬರುತ್ತೆ ಅಂತಿದ್ರು ಆದ್ರ ಹಂಗೆ ನಾವು ನಡೆದ್ದಿದ್ದು ಸುಮಾರು 3km.. ಅದ್ಕೆ ನಮಗೆ ಭಟ್ಟರಿಗೆ ಸ್ವಲ್ಪ ಆಗಿ ಬರಾಂಗ ಕಾಣಿಸವಲ್ದು ನೋಡು ... ಎಲ್ಲರೂ ಇದೆ ಹೇಳಾಕತ್ತಾರ ಆ ಭಟ್ಟರ ಮನೆ ಇದೇನೋ ಇಲ್ಲೋ ಮಾರಾಯ ಅಂತಿದ್ರು... 
ಹಂಗೆ ಹಿಂಗೆ ಮಾಡಿ ಸುಮಾರು 1:20  ಕ್ಕೆ ಭಟ್ಟರ ಮನೆ ಪ್ರತ್ಯಕ್ಷವಾಯಿತು...:)

ತಂದಿರೋ ನೀರೆಲ್ಲ ಕುಡಿದು ಕುಡಿದು ಕಾಲಿ ಮಾಡ್ಕೊಂಡಿದ್ವಿ .. ಭಟ್ಟರ ಮನೆ ಸಿಕ್ಕಿರೋದು ಮರಭೂಮಿಯೊಳಗೆ ಕಾರಂಜಿ ಸಿಕ್ಕಂಗಾಗಿತ್ತು... 
ಎಲ್ಲರೂ ಮೊದಲು ಮುಖಗಳನ್ನ ತಣ್ಣನೆ ನೀರಿಂದ ತೊಳೆದುಕೊಂಡು ಭಟ್ಟರ ಮನೇಲಿ ಊಟ ಮಾಡೋದಕ್ಕೆ ಕುಳಿತರು... 
ಈ ಭಟ್ಟರ ಮನೇಲಿ ಸಿಗೋ ಊಟ ಅಂದ್ರೆ ಅನ್ನ ಮತ್ತು ಸಾಂಬಾರ್ ಅದರ ಜೊತೆ ಉಪ್ಪಿನ ಕಾಯಿ ಮತ್ತು ಮಜ್ಜಿಗೆ... 
ಅನ್ನ ಮತ್ತು ಸಾಂಬಾರ್ರೆ ಇರಬಹುದು ಆದ್ರೆ ನಮಗೆ ಆಗಿರುವ ಹೊಟ್ಟೆ ಹಸಿವಿಗೆ ಅದು ಅಮೃತ ಸಿಕ್ಕಿದೆಯೇನೋ ಅಂತ ಹೊಟ್ಟೆ ತುಂಬಾ ತಿಂದುಬಿಟ್ಟ್ವಿ...  ನಿಜವಾದ ಅನ್ನದ ರುಚಿ ಗೊತ್ತಾಗೋದು ಹೊಟ್ಟೆ ಸಕ್ಕತ್ತಾಗಿ ಹಸಿದಾಗಲೇ ಅಂತಾರಲ್ಲ ಅದು ಸುಳ್ಳಲ್ಲ.... 













ಊಟ ಮಾಡಿದಮೇಲೆ ಸ್ವಲ್ಪ ವಿಶ್ರಾಂತಿ ತಗೆದುಕೊಂಡು, ಭಟ್ಟರ ಮನೆ ಹತ್ತಿರ ಮತ್ತೆ ಫೋಟೋಸ್ ಗೆ ಪೋಸ್ ಕೊಟ್ಟು ನೀರಿನ ಬಾಟಲಿಗಳನ್ನ ತುಂಬಿಕೊಂಡು  ಅಲ್ಲಿಂದ ಮದ್ಯಾನ 2:30 ಗೆ ಹೊರಟೆವು... ಹಾಗೆ ಸುಮಾರು 30 ನಿಮಿಷ ಸಾಗಿದರೆ ಒಂದು view  point  ಸಿಗುತ್ತೆ ಅಲ್ಲಿಂದ ನೋಡಿದರೆ ಎತ್ತಕಡೆ ನೋಡಿದರು ಹಸಿರುಮಯ... ನೆಂಟರು ಬರುತ್ತಾರೆಂದು ಹಸಿರು ತೋರಣಗಳಿಂದ ಸಿದ್ದವಾಗಿರೋ ಮದುವೆಯ ಮನೇನಾ ಇದು ಅನಿಸ್ತಿತ್ತು ... ಅಲ್ಲಿ ಸ್ವಲ್ಪ ವಿಶ್ರಾಂತಿ ತಗೆದುಕೊಂಡು ಹಾಗೆ ರಾಜರ ಹಾಗೆ ಕುಳಿತು ಫೋಟೋಸ್ ತಗೆದುಕೊಂಡು ಮತ್ತೆ ಮುಂದೆ ಸಾಗಿದೆವು...  













ಅರಣ್ಯ ಕಚೇರಿಯಲ್ಲಿ ಟ್ರೆಕಿಂಗ್ ಫೀ ಕೊಟ್ಟು ಅನುಮತಿ ಪಡೆದುಕೊಂಡು ಮುಂದೆ ಸಾಗಿದ್ವಿ...  






ಅಲ್ಲಿಂದ ಶೇಷ ಪರ್ವತ ನೋಡಿದರೆ ತುಂಬಾ ಚೆನ್ನಾಗಿ ಕಾಣಿಸುತ್ತೆ . ದೂರದಿಂದ ಟ್ರೆಕ್ಕಿಂಗ್ ಮಾಡುತ್ತಿರುವ ಜನರನ್ನ ನೋಡಿದರೆ ಇರುವೆ ಸಾಲುಗಳಂತೆ ಕಾಣಿಸ್ತಿದ್ರು ... ಟ್ರೆಕ್ಕಿಂಗ್ ಪಯಣ ಸುಮಾರು ಸಾಯಂಕಾಲ 5:40 ಕ್ಕೆ ಕಲ್ಲು ಮಂಟಪದ ಹತ್ತಿರ ಮುಟ್ಟಿತು... ಬೇರೆ trekkers  ಕಲ್ಲು ಮಂಟಪದ ಹತ್ತಿರ ಟೆಂಟ್ ಹಾಕಿರೋ ಕಾರಣ ನಾವು ಕಲ್ಲು ಮಂಟಪದಿಂದ ಸ್ವಲ್ಪ ಹತ್ತಿರಾನೆ ಇರೋ ನೀರಿನ ತಾಣದ ಹತ್ತಿರ ನಮ್ಮ ವಸತಿ ಅಂತ ಡಿಸೈಡ್ ಮಾಡಿದ್ವಿ... 
ಟೆಂಟ್ ಹಾಕಲು ಒಂದು ಜಾಗ ಹುಡುಕಿ... ಎಲ್ಲರೂ ನಮ್ಮ ಲಗೇಜುಗಳನ್ನ ಅಲ್ಲೇ ಇಟ್ಟು... ಆ ಕಡೆ ಈ ಕಡೆ ಸುತ್ತಾಡಿ ಬಂದು ಕುಳಿತೆವು... 



ಅಸ್ಟರಲ್ಲಿ ಸಂಜೀವ್ ನಂಗೆ ಕಾಫಿ ಬೇಕು ಅಂದ... ಅವಾಗ್ಲೇ ನೋಡ್ರಿ ಎಲ್ಲರಿಗೂ ಶಾಕ್ ಹೊಡೆದಿದ್ದು... 
ಕತ್ತಲಾಗೊದ್ರೊಳಗೆ ಅಡುಗೆ ಮಾಡೋದಕ್ಕೆ ಕಟ್ಟಿಗೆ(ಸೌದೆ) ಗಳನ್ನ ತಗೆದುಕೊಂಡು ಬರಬೇಕು... ನಾವು ಹೋಗಿರೋದು ಫೆಬ್ರವರಿ ಇರೋದ್ರಿಂದಾನೋ  ಅಥವಾ ನಮ್ಮ ಅದೃಷ್ಟಾನೋ ಏನೋ ಹಂಗೆ ಹಿಂಗೆ ಕಷ್ಟ ಪಟ್ಟು ಹುಡುಕಿ ಕಟ್ಟಿಗೆಗಳನ್ನ ತಗೆದುಕೊಂಡು ಬಂದ್ವಿ... ಊಟದ ವ್ಯವಸ್ತೆಗೆ ಬೇಕಾಗೊವಷ್ಟು ಸೌದೆ/ಕಟ್ಟಿಗೆಗಳನ್ನ ತಂದು ಹಾಕಿದ್ವಿ... 
ಆವಾಗಲೇ ಸಂಜೆ ಆಗ್ತಿರೋದ್ರಿಂದ ತಣ್ಣನೆ ಗಾಳಿ ಬೀಸೋಕೆ ಶುರು ಮಾಡಿತ್ತು .. ಒಲೆ ಹೂಡಿ ಇವಿನಿಂಗ್ ಕಾಫಿ ಕುಡಿತಾ ತಣ್ಣನೆ ಗಾಳಿಂದ ಪ್ರೊಟೆಕ್ಟ್  ಮಾಡಕೊಂಡ್ವಿ..... 







ಕಾಫಿ ಕುಡಿದ ಪರಿಣಾಮವೋ ಅಥವಾ ಕಲ್ಲು ಮಂಟಪ ಕ್ಕೆ ಬಂದು ಮುಟ್ಟಿದೆವು ಅನ್ನೋ ತ್ರುಪ್ತಿಗೋ  ಕೆಲವೇ ನಿಮಿಷಗಳಲ್ಲಿ ಟೆಂಟ್ ಗಳನೆಲ್ಲ ಹಾಕಿದ್ವಿ... 
ಮಲಗಲು ಮನೆ ರೆಡಿ ಆಯಿತು .. 




ಎಲ್ಲರೂ ಕೆಲವೊಂದು ಕೆಲಸಗಳನ್ನು ಹಂಚಿಕೊಂಡು ರಾತ್ರಿ ಊಟಕ್ಕೆ ಬೇಕಾಗಿರೋ ತರಕಾರಿ ಹೇರಚೋದು, ಅಕ್ಕಿ ತೊಳೆಯೋದು ಇತ್ಯಾದಿ ಇತ್ಯಾದಿ  ರೆಡಿ ಮಾಡಿದ್ವಿ... .. 
ಒಲೆ ಹೂಡಿ ರೈಸ್ ಬಾತ್ ಗೆ ಕುದಿಯಲು ಇಟ್ಟು .. ಹಾಗೆ fire camp ಮಾಡ್ಕೊಂಡು ಊಟ ರೆಡಿ ಮಾಡಿದ್ವಿ.... ಊಟ ರೆಡಿ ಮಾಡ್ಕೊಂಡು fire  camp ಮುಂದೆ ಕುಳಿತು ನೈಟ್ ಮಸ್ತ್ ಊಟ ಮಾಡಿದ್ವಿ... ಊಟ ಆದಮೇಲೆ ಹಾಗೆ ಸ್ವಲ್ಪ ಮಾತಾಡುತ್ತ ಕುಳಿತು ಬೆಳಿಗ್ಗೆ ಬೇಗ ಏಳಬೇಕು ಅಂತ ಮಲ್ಗಿದ್ವಿ...








ಹುಲಿ ಬಂತು ಹುಲಿ :-

ದಿನವೆಲ್ಲ ಟ್ರೆಕ್ಕಿಂಗ್ ಮಾಡಿರೋದ್ರಿಂದ ಎಲ್ಲರೂ ತುಂಬಾ ದಣಿದಿದ್ದದ್ರು.. ಆದ್ದರಿಂದ ಬೇಗನೆ ನಿದ್ದೆಗೆ ಜಾರಿದ್ರು...
ರಾತ್ರಿ ಸುಮಾರು 2 ಆಗಿರಬಹುದು... ನಮ್ಮ ಟೆಂಟ್ ಪಕ್ಕ ಒಂದು ಹುಲಿ ನಿಂತು ಗುರ್ರ್ ಗುರ್ರ್ ಅಂತ ಸೌಂಡ್ ಮಾಡ್ತಿದೆ... 

ವಿಜಯ್:  ಪಕ್ಕದಲ್ಲಿ ಮಲಗಿದ್ದ ನನ್ನನು ಹಾಗೆ ನಿಧಾನವಾಗಿ ಎಬ್ಬಿಸಿ ಹೇಳಿದ ಚನ್ನ ನಮ್ಮ ಟೆಂಟ್ ಪಕ್ಕ ಹುಲಿ ಬಂದಿದೆ
ಚನ್ನ: (ಮಾತೆ ಬರಲಿಲ್ಲ .. ಒಮ್ಮೆಲೇ ನಿಶಬ್ದನಾಗಿದ್ದೆ... ಬಾಯಿಂದ ಮಾತೆ ಬರ್ತಿಲ್ಲ ಹಾಗೋ ಹೇಗೊ ಸುಧಾರಿಸಿಕೊಂಡು) ಹೆಂಗ್ ಹೆಂಗ್ ಬಂತೋ ಅದು.. 
ವಿಜಯ್: ಅದೆಲ್ಲ ಮಾತಾಡೋಕೆ ಟೈಮ್ ಇಲ್ಲ.. ಈಗ ಏನ್ ಮಾಡೋದು?
ಚನ್ನ: ಎಲ್ಲರನ್ನೂ ನಿಧಾನವಾಗಿ ಎಬ್ಬಿಸು,,, ಜಾಸ್ತಿ ಅವಾಜ್/ಸೌಂಡ್ ಮಾಡಿದ್ರ ಅದು ನಮ್ ಮ್ಯಾಲ ಅಟ್ಯಾಕ್ ಮಾಡ್ತದ. 
ವಿಜಯ್:  ಅಣ್ಣ(ಅಣ್ಣರಾವ್) & ಅಂಬಿ ಅಂತ ಇಬ್ಬರ್ನ ಎಬ್ಬಿಸಿದ... 
ಚನ್ನ: ಸುರೇಶ ಮತ್ತು ಸಂಜುನ  ಎಬ್ಬಿಸಿದ
ಎಲ್ಲರೂ ಫುಲ್ ನಿದ್ದೆ  ಮೂಡಲ್ಲಿದ್ದರು... 
ವಿಜಯ್: ಲೋ ನಮ್ ಟೆಂಟ್ ಪಕ್ಕ ಹುಲಿ ಇದೆ ಯಾರು ಸೌಂಡ್ ಮಾಡ್ಬೇಡಿ.. 
ಎಲ್ಲರೂ: ಒಮ್ಮೆಲೇ ನಿದ್ದೆಯಿಂದ ಶಾಕ್ ಹೊಡೆದವ್ರಂಗೆ ಹ್ಹಾ ಅಂದ್ರು...  ಹೆಂಗೆ ಬಂತು?  ಎಲ್ಲ್ಕಿಂದ  ಬಂತು?

ಚನ್ನ: ಅವನೌನ್ ಅದೇನು ಹೇಳಿ ಬಂದಾದ ಎಲ್ಲಿಂದ ಬಂತು ಹೆಂಗ ಬಂತು ಅನ್ನಾಕ..ಮುಂದೇನು ಮಾಡಾದು ಚಿಂತಿ ಮಾಡ್ರಲೇ.. 
ಎಲ್ಲರೂ: ಒಬ್ಬರಿಗೊಬ್ಬರು ಮಾತಾಡುತ ಧೈರ್ಯ ತುಂಬಿಕೊಂಡು ಒಂದು ನಿರ್ದಾರಕ್ಕೆ ಬಂದ್ವಿ, ಎಲ್ಲರ ಹತ್ತಿರ ಟಾರ್ಚ್ ಇದೆ ಆದ್ದರಿಂದ 
ಒಮ್ಮೆಲೇ ಟಾರ್ಚ್ ಹಿಡ್ಕೊಂಡು ಎದ್ದು ಹುಲಿನ ಅಂಜಿಸಿ ಓಡಿಸೋಣ.. ( ನೋಡ್ರಿ ಇವರೇನು ಟಿಪ್ಪು ಸುಲ್ತಾನ ಅನ್ಕೊಂಡ್ರ ಹ್ಯಾಂಗ ಹುಲಿನ ಟಾರ್ಚ್ ಇಂದ ಅಂಜಿಸಿ ಓಡಿಸ್ತಾರಂತ... !!!!!!!!!!!)

ವಿಜಯ್: ನಾನು ಒಂದು, ಎರಡು, ಮೂರು ಅಂತೀನಿ.. ಮೂರು ಅಂದಾಕ್ಷಣ ಎಲ್ಲರೂ ಒಮ್ಮೆಲೇ ಟಾರ್ಚ್ ಹಿಡ್ಕೊಂಡು sudden ಆಗಿ ಟೆಂಟ್ ಇಂದ ಹೊರಗೆ ಬರಬೇಕು... 
ಎಲ್ಲರೂ: ok  ಅಂದ್ರು... ( ಮೇಲೆ ಮೇಲೆ ಎಲ್ಲರೂ "ok" ಅಂತಿದ್ರು ಆದ್ರ ಒಳಗೊಳಗೆ ಪುಂಗಿ ಬಂದಾಗಿತ್ತು)
ವಿಜಯ್: ಒಂದೋ, ಎರಡೋ.... ..... .... ... ಮೂ... ರೋ... ಅಂದಿದ್ದೆ ತಡ 
ಎಲ್ಲರೂ ಒಮ್ಮೆಲೇ ಟಾರ್ಚ್ ಹಿಡ್ಕೊಂಡು ಇದ್ದಿರೋ ಬಿದ್ದಿರೋ ಧೈರ್ಯ ತಗೊಂಡು ಟೆಂಟ್ ಇಂದ ಹೊರಗೆ ಓಡಿ ಬಂದ್ವಿ... 

ಹುಲಿ ಹೇಗಿರಬೇಕು ಅಂತ ಸ್ವಲ್ಪ ನೀವೇ ಊಹಿಸಿ...... 

ಹೊರಗೆ ಬಂದೊಡನೆ ಎಲ್ಲರೂ silent.... !!!!!!!!!!!
ಯಾರಿಂದಲೂ ಮಾತು ಬರ್ತಿಲ್ಲ... 

ಅಷ್ಟೊತ್ತು ಅಲ್ಲಿ ನಾವು ಅಂದುಕೊಂಡಂಗೆ ದೊಡ್ಡ ಗಾತ್ರದ ಧೈತ್ಯ ದೇಹದ, ಕಾಡಲ್ಲಿ ಬೇರೆ ಪ್ರಾಣಿಗಳ ಹಸಿ ಮಾಂಸಾನ ಒಂದೇ ಏಟಿಗೆ ತಿಂದು ತೇಗಿ ಕೊಬ್ಬಿರೋ ಮತ್ತು ಹತ್ತು ಹುಲಿಗಳಷ್ಟು ಒಂದೇ ಹುಲಿ ಗುರ್ರ್ ಅಂತ ಸೌಂಡ್ ಮಾಡ್ತಿರೋ ಆ ಹುಲಿರಾಯ ಇಲ್ಲ ಗಿಲಿರಾಯ ಇಲ್ಲ... 
ರಾತ್ರಿ ನಾವು ಬೆಟ್ಟದ ಮೇಲೆ ಟೆಂಟ್ ಹಾಕಿರೋದ್ರಿಂದ ರೌದ್ರಾವತಾರದಿಂದ ಬೀಸುತಿರುವ ಆ ವಾಯು ಮಹಾರಾಜರ ಆರ್ಭಟಕ್ಕೆ ನಮ್ಮ ಟೆಂಟ್ ಸಿಕ್ಕಾಕೊಂಡು ಹಾಗೆ ಸೌಂಡ್ ಬರ್ತಿತ್ತು... 
ಅದನ್ನ ಹೊರಗೆ ಒಮ್ಮೆಲೇ ಓಡಿ ಬಂದು ನೋಡಿ ಎಲ್ಲರಿಗೂ ಮಾತೆ ಬರದಂಗಾಗಿತ್ತು.. ...  ಇಷ್ಟೊತ್ತು ಹೆದರಿಸಿದ್ದ ಹುಲಿರಾಯ ಇದೇನಾ?
ಅಂತು ಇಂತೂ ಒಬ್ಬರಿಗೊಬ್ಬರು ನಕ್ರ ಮಾಡ್ತಾ ಮತ್ತೆ ಮಲ್ಗಿದ್ವಿ.... ಶುಭ ರಾತ್ರಿ :) 

2 ನೇ ದಿನ:-

ಬೆಳಿಗ್ಗೆ 6:00 ಕ್ಕೆ ಎದ್ದು ಸೋರ್ಯೋದಯನ ನೋಡಿ..  ಬೆಡ್ ಕಾಫಿ ಮಾಡಿಕೊಂಡು ಕುಡಿದು.. ಎಲ್ಲರೂ ರೆಡಿ ಆಗಿ ಬೆಳಗಿನ ತಿಂಡಿಗೆ ನೂಡಲ್ಸ್ ಮತ್ತು ವೋಗ್ಗರಣೆ ಹಾಕಿದ ಅನ್ನ ತಿಂದು ಮತ್ತೆ ಒಂದೆರಡು ಕಪ್ ಕಾಫಿ ಕುಡಿದು ಮತ್ತೆ ಒಂದಿಷ್ಟು ಫೋಟೋಸ್ ಗೆ ಪೋಸ್ ಕೊಟ್ಟು , ಗಂಟು ಮೂಟೆ ಕಟ್ಟಿಕೊಂಡು    ಮುಂದೆ ಸಾಗಿತು ನಮ್ಮ ಪಯಣ...










ಕಲ್ಲು ಮಂಟಪದಿಂದ ಮುಂದೆ ಟ್ರೆಕ್ಕಿಂಗ್ ತುಂಬಾನೇ ಕಷ್ಟ  ಹಾಗೋ ಹೇಗೊ ಕಷ್ಟ ಪಟ್ಟು ಸುಮಾರು 11 ಕ್ಕೆ ಪುಷ್ಪಗಿರಿ ಮುಟ್ಟಿದ್ವಿ...  ಅಲ್ಲಿ ಒಂದಿಸ್ಟ್ ಸಿಳ್ಳೆ ಹೊಡೆದು ಏನೋ ಸಾಧಿಸಿದ್ವಿ ಅಂತ ಚೀರಾಡಿ..  ಕೂಗಾಡಿದ್ವಿ...












ಅಲ್ಲೇ ಸ್ವಲ್ಪ ಸಮಯ ವಿಶ್ರಾಂತಿ ತಗೆದುಕೊಂಡು .. ಬೆಟ್ಟ ಇಳಿಯೋದಕ್ಕೆ ಶುರು ಮಾಡಿದ್ವಿ.. 
ಅಲ್ಲಿಂದ ಇಳಿಯೋವಾಗ ಸ್ವಲ್ಪ ಕಷ್ಟ ಇದೆ ಆದರೂ ಏನೋ ಗುರಿ ಮುಟ್ಟಿ ಬಂದಿದ್ವಿ ಅನ್ನೋ ಹುಮ್ಮಸ್ಸಲ್ಲಿ ಅದೇನು ನಮಗೆ ಅಸ್ಟೊಂದು ಕಷ್ಟ ಅನಿಸಲಿಲ್ಲ ... ಅಲ್ಲಿಂದ ದಟ್ಟವಾದ ಕಾಡಲ್ಲಿ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ವಿಶ್ರಾಂತಿ ತಗೆದುಕೊಂಡು , ಫೋಟೋಸ್ ಗೆ ಪೋಸ್ ಕೊಡ್ತಾ ಸುಮಾರು ಸಾಯಂಕಾಲ 5ಕ್ಕೆ ಸೋಮವಾರ ಪೇಟೆ ಸೇರಿದ್ವಿ ... ಅಲ್ಲಿಂದ ಕ್ವಾಲಿಸಲ್ಲಿ ಹೊರಟು ಬೆಳಗಿನ ಜಾವ ಬೆಂಗಳೂರು ಸೇರಿದ್ವಿ... 
ಹೀಗೊಂದು ಕರ್ನಾಟಕದಲ್ಲೇ ಕಷ್ಟಕರವಾದ ಟ್ರೆಕ್ಕಿಂಗ್ ಮಾಡಿದ್ವಿ ಅಂತ ಹಿಗ್ಗಿ ಹಿಗ್ಗಿ ಹೋದ್ವಿ.... 



ಕೃತಜ್ಞತೆಗಳು:-

ವಿಜಯ ಕುಮಾರ್ CM   ( ಟ್ರೆಕ್ಕಿಂಗ್ ವ್ಯವಸ್ತಾಪಕರು )
ಮತ್ತು ಟ್ರೆಕ್ಕಿಂಗಲ್ಲಿ  ಬಾಗವಹಿಸಿದ ಎಲ್ಲ  ಗೆಳೆಯರಾದ ಅಣ್ಣರಾವ್, ಅಂಬರೀಶ್, ಸಂಜೀವ್, ಯಶೋಧರ ಗೌಡ, ಸುರೆಶಚಾರಿ  ಮತ್ತು ಚನ್ನ 


ಮಾಹಿತಿ:-

ಸ್ಥಳ: ಕುಮಾರ ಪರ್ವತ ( KUMARA PARVATA (KP) ) - ಸುಳ್ಯ ತಾಲೂಕು, ದಕ್ಷಿಣ ಕನ್ನಡ, ಕರ್ನಾಟಕ.ಟ್ರೆಕ್ಕಿಂಗ್ ಶುರು ಮಾಡುವ ಸ್ಥಳ: ಕುಕ್ಕೆ/ ಸೋಮವಾರಪೇಟೆ

ದೂರ: ಬೆಂಗಳೂರಿನಿಂದ  282 ಕಿ.ಮೀ. (
ಕುಕ್ಕೆ) / 234 ಕಿ.ಮೀ( ಸೋಮವಾರಪೇಟೆ )
 

ಹೋಗುವ ಬಗೆ: ಸ್ವಂತ ವಾಹನ/ ಬಸ್ಸು/ರೈಲು( ಸುಬ್ರಮಣ್ಯ ರೋಡ್ ವರೆಗು)

ಮಾರ್ಗ:-

ಬೆಂಗಳೂರು( NH-73 Highway)-->ಕುಣಿಗಲ್ಚ-->ನ್ನರಾಯಪಟ್ಟಣ-->ಸಕಲೇಶಪುರ-->ಮಂಜರಾಬಾದ್ ಕೋಟೆ-->ಕುಕ್ಕೆ     
ಬೆಂಗಳೂರು ( NH-73 Highway)-->ಕುಣಿಗಲ್ -->ಚನ್ನರಾಯಪಟ್ಟಣ -->ಹೊಳೆನರಸೀಪುರ -->ಸೋಮವಾರಪೇಟೆ

ಭಟ್ಟರ ಮನೆ - 1 ಊಟಕ್ಕೆ 80 ರೂ.
ಅರಣ್ಯ ಇಲಾಖೆಯಲ್ಲಿ 
ಟ್ರೆಕ್ಕಿಂಗ್ ಮಾಡಲು - ತಲಾ 200 ರೂ. 



....ಸಲಹೆ ಸೂಚನೆಗಳನ್ನು  ಹೃತ್ಪೂರ್ವಕವಾಗಿ ಸ್ವೀಕರಿಸುತ್ತೇನೆ .....

No comments: