Tuesday 2 July 2013

ಮಂಜಿನ ಸ್ವರ್ಗಕ್ಕೊಂದು ಬಾಗಿಲು ತಗೆದಾಗ ( Trek to Mullayanagiri - 22nd & 24th June 2013)






ಮುಳ್ಳಯನಗಿರಿ;-


ಮುಳ್ಳಯನಗಿರಿ  ಚಿಕ್ಕಮಂಗಳೂರಿಗೆ ಸುಮಾರು ನಲವತ್ತು ಕಿ.ಮಿ. ದೂರದಲ್ಲಿರುವ ಪ್ರಕೃತಿ ಉಸಿರಾಡುವ ಸ್ಥಳ. ಉದ್ದಕ್ಕು ಹರಡಿ ನಿಂತ ಬಾಬಬುಡನ್ ಗಿರಿ ಶ್ರೇಣಿಗಳು, ಆ ಬೆಟ್ಟಗಳನ್ನೆಲ್ಲ ಆವರಿಸಿ ನಿಂತಿರುವ ಹಸಿರಿನ ಹೊದ್ದಿಗೆ,  ಆಕಾಶಕ್ಕು ಭೂಮಿಗು ಪ್ರಕೃತಿ ನಿರ್ಮಿಸಿರುವ ಜಾರುಬಂಡೆಯಂತೆ  ಕಾಣುವ ಪರ್ವತಗಳು. ಕಾಫಿ ತೋಟ , ಹನುಮ ಹೊತ್ತುತಂದ ಸಂಜೀವಿನ ಪರ್ವತದ ಭಾಗ ಎಲ್ಲವು ಸುತ್ತವರೆದು ಸ್ಥಳದ ಆಕರ್ಷಣೆ ಹೆಚ್ಚಿಸುತ್ತದೆ.ಹಿಮಾಲಯ ಹಾಗೂ ನೀಲಗಿರಿಗಳ ನಡುವೆ ಸಮುದ್ರಮಟ್ಟದಿಂದ ೬೩೦೦ ಅಡಿಗಳಷ್ಟು ಎತ್ತರದಲ್ಲಿರುವ ಕರ್ನಾಟಕದ ಶೃಂಗ, ಈ ಮುಳ್ಳಯನಗಿರಿ.  ಕಡೆಯಲ್ಲಿ ಸುಮಾರು ೩೦೦ ಮೆಟ್ಟಿಲು ಹತ್ತಬೇಕಾಗಿರುವದಾದರು, ವಾಹನದಲ್ಲಿ ಹೋಗಬಹುದು. ಆದರೆ ನೀವೆ ವಾಹನ ಚಾಲನೆ ಮಾಡುವಿರಾದರೆ ಎಚ್ಚರ , ಇಲ್ಲಿ ವಾಹನ ಮುನ್ನಡೆಸಲು ಅತ್ಯಂತ ಪಳಗಿದ ಡ್ರೈವರ್ ಬೇಕಾಗಿರುತ್ತದೆ. ವಾಹನದಲ್ಲಿ ಇಳಿಯುವಾಗ ಅತಿ ಎಚ್ಚರಿಕೆಯ ಅಗತ್ಯವಿದೆ. ಮೆಟ್ಟಿಲುಗಳನ್ನು ಹತ್ತಲು ಅಂತ ಕಷ್ಟವೆಂದೇನು ಅನಿಸುವದಿಲ್ಲ. ಗಿರಿಯ ತುದಿಯಲ್ಲಿರುವ ಮುಳ್ಳಯನ ದೇವಾಲಯದಲ್ಲಿ ಹೋಗಿ ನಿಂತರೆ ಸಾರ್ಥಕ ಭಾವ.  


ಪ್ರವಾಸ ಕಥನ/ಟ್ರೆಕ್ಕಿಂಗ್  ವಿವರ:-

ಅಂದ ಹಾಗೆ ಎಲ್ಲರೂ ರಾತ್ರಿ  11:25ಕ್ಕೆ ಶಾಂತಲ ಸಿಲ್ಕಿಂದ ಹೊರಟು ಶನಿವಾರ ಬೆಳಗಿನ ಜಾವ 3.45 ಕ್ಕೆ ಕಲ್ಲಥಗಿರಿ ಹತ್ತಿರವಿರುವ Wildnest ಹೋಂ ಸ್ಟೇ  ಗೆ ಹೋಗೋಕೆ ಕಾಡಿನ ದಾರಿಯಲಿ ಸಾಗಿದೆವು.. ಆದರೆ ಏನಾಯ್ತು ಅಂದ್ರೆ ನಾವು ಒಂದು ಎಡವಟ್ಟು ಮಾಡಿಕೊಂಡಿದ್ದೆವು, ಅದೇನಂದರೆ ಕಲ್ಲಥಪುರದಿಂದ ಸುಮಾರು 1.5 ಕಿ.ಮೀ  ಹೋದರೆ ಅಲ್ಲೇ ನಾವು ಹೋಗಬೇಕಾದ ಹೋಂ ಸ್ಟೇ ನಾಮಫಲಕ ಕಾಣಿಸುತ್ತದೆ.. ಅದು ಬೆಳಗಿನ ಜಾವದ ರಾತ್ರಿಯಾಗಿರೋದ್ರಿಂದ ಮುಂದೆ ಮುಂದೆ ಹೋಗ್ತಾನೆ ಇದ್ದೀವಿ ಆದರು ಎಸ್ಟೇಟ್ ಬರ್ತಿಲ್ಲಾ.... ಯಾಕೋ ಅನುಮಾನ ಬಂದಾಗ ಎಸ್ಟೇಟ್ ಮಾಲಿಕರಿಗೆ ಕರೆ ಮಾಡಿ ಕೇಳಿದಾಗ ಗೊತ್ತಾಗಿದ್ದು ನಾವು ಆ ನಾಮಫಲಕ ನೋಡದೆ ಹಾಗೆ ಮುಂದೆ ಸುಮಾರು 5 ಕಿ.ಮೀ ದೂರ ಹೋಗಿದ್ದೆವು ...ಸರಿ ಹೋಯ್ತು ಅಂತ ಮತ್ತೆ ಹೋದ ದಾರಿಲೇ ಮರಳಿ ಬರುತಿರೆ ಕಾಣಿಸಿತು ನೋಡ್ರಿ ನಾಮಫಲಕ Wildernest ಎಸ್ಟೇಟ್ ಅಂತ .. ಆವಾಗ ಸಮಯ ಬೆಳಿಗ್ಗಿನ 4 ಘಂ. ಹ್ಹೋ ಅಂತೂ ಬಂತು, ಎಸ್ಟೇಟ್ ಬಂತು ಅಂತ ಏನೋ ಒಂದು ತರಹ ಒಳಗೊಳಗೇ ಖುಷಿ... ಮುಖ್ಯ ದಾರಿಯಿಂದ ಕಾಡಿನೊಳಗೆ ಮಣ್ಣಿನ ದಾರಿಯಲಿ ಹೋಗಬೇಕಾಗಿರೋದ್ರಿಂದ ಮತ್ತು ನಾವು ಬರಬೇಕಾಗಿರೋ ಬೆಳಗಿನ 6 ಘಂಟೆಗೆ ಮುಂಚೆನೇ ಬಂದಿರೋದ್ರಿಂದ.. ಇನ್ನು ಸಮಯವಿದೆ ಆದುದರಿಂದ, ಎಸ್ಟೇಟ್ ವರೆಗೂ ನಡೆದುಕೊಂಡು ಹೋಗೋಣ ಅಂತ ಅನ್ನೋದ್ರೊಳಗೆ ನಾ ಬರ್ತೀನಿ ನೀ ಬರ್ತೀನಿ ಅಂತ ಆರು ಜನರು ರೆಡಿ ಆದರು... ಇನ್ನುಳಿದವರು TT ಯಲ್ಲಿನೆ ಎಸ್ಟೇಟ್ ಗೆ ಹೊರಟರು... ನಾವು ಮಾತ್ರ ಬೆಳಗಿನ ಆ ಚುಮು ಚುಮು ಮೈ ಕೊರೆಯುವ ಚಳಿಯಲಿ,  ಮಳೆ ಬಂದು ರಸ್ತೆಯಲ್ಲ ಒದ್ದೆಯಾಗಿರೋ ಆ ಮಣ್ಣಿನ ದಾರಿಯಲಿ ನಡೆದುಕೊಂಡೇ ಎಸ್ಟೇಟ್ ತಲುಪಿದೆವು... 





Home Stay



ಇನ್ನು ಬೆಳಕಾಗಿರದ ಕಾರಣ ಸ್ವಲ್ಪ ಮಲಗಿ ವಿಶ್ರಾಂತಿ ತಗೆದುಕೊಳ್ಳಿ.. ಬೇ. 6 ಕ್ಕೆ ನಾನು ಬಂದು ನಿಮ್ಮನ್ನ ಕಾಣುತ್ತೇನೆ ಅಂತ ಎಸ್ಟೇಟ್ ಮಾಲೀಕರು ಹೇಳಿದರು... ಸರಿ ಅಂತ ನಾಲ್ಕು ರೂಮುಗಳಲ್ಲಿ ತಂಗಿದೆವು,  ಸ್ವಚ್ಚವಾಗಿರೋ ಆ ರೂಮುಗಳನ್ನ ನೋಡಿದರೆ ಅದೊಂದು ಒಳ್ಳೆಯ ಎಸ್ಟೇಟ್ಗೆ ಬಂದಿದಿವಿ ಅಂತ ಎಲ್ಲರೂ ಖುಷಿ ಪಟ್ಟರು... 


ದಿನ 1;- 


ಬೆಳಿಗ್ಗೆ ಏಳೋದರೊಳಗೆ  ನಮಗೋಸ್ಕರ ತಣ್ಣನೆಯ ಚಳಿಯನು ಹೋಗಲಾಡಿಸಲು ಕಾದು ಕುಳಿತಿರುವ ಹಾಗೆ ಬಿಸಿ ಬಿಸಿ ನೀರು  ರೆಡಿ ಆಗಿತ್ತು... 
ಎಲ್ಲರೂ ಸ್ನಾನ ಮಾಡಿ ರೆಡಿ ಆಗಿ ಬರೋದ್ರೊಳಗೆ.. ನಾಷ್ಟ ತಯಾರಾಗಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಅಂತ ಆ ಕಡೆಯಿಂದ ಒಂದು  ಕರೆವಾಣಿ ಬಂತು..ಅಲ್ಲಿವರೆಗೂ ಏನ್ ಮಾಡೋದು ಹಾಗೆ ಒಂದು ಸುತ್ತು ಕಾಫಿ ಎಸ್ಟೇಟ್ ಸುತ್ತಾಡಿ ಬರೋಣವೆಂದು ಎಲ್ಲರೂ ಹೊರಟೆವು.. 

ತುಂತುರು ಮಳೆಯಲಿ ಹಾಗೆ ಒಂದು ರೌಂಡು ಎಸ್ಟೇಟ್ ಸುತ್ತಾಡಿ ಮರಳಿ ಬರುತಿರೆ  ಬೆಳಗಿನ ಉಪಹಾರಕ್ಕೆ ಪುರಿ ಜೊತೆ ಆಲು ಪಲ್ಯ ಮತ್ತು ಕೊಬ್ಬರಿ ಚಟ್ನಿ ನಮಗೋಸ್ಕರ ಟೇಬಲ್ ಮೇಲೆ ಕುಳಿತು ಕೈ ಮಾಡಿ ಕರಿತಿರೆ ನಾವು ಬಿಡ್ತೀವಾ... ಮುಂಜಾನೆದ್ದು ಆ ತಣ್ಣನೆ ಕೊರೆಯುವ ಚಳಿ ಹೋಗಲಾಡಿಸಲು ಬಿಸಿ ನೀರಿನ ಸ್ನಾನ ಮಾಡಿದ ಹುರುಪಿನಲ್ಲಿರುವವರಿಗೆ  ಬಿಸಿ ಬಿಸಿ ಪುರಿ ಭೋಜನ ಸಿಕ್ಕರೆ ಹೇಗಿರುತ್ತೆ ಗೊತ್ತಾ, ಅದು ನಿಜವಾಗಲು ಮೃಷ್ಟಾನ್ನ ಭೋಜನವೇ ಸರಿ... 
ಸುತ್ತಮುತ್ತಲು ಹಚ್ಚ ಹಸುರಿನಿಂದ ತುಂಬಿ ತುಳುಕುತ್ತಿರುವ ದಟ್ಟ ಕಾಡಿನಲ್ಲೊಂದು ಪುಟ್ಟ ಕೊಂಪೆ (HUT) ಅದರೊಳಗೆ ಎಲ್ಲರೂ ಕುಳಿತು ಪುರಿ ಭೋಜನ ತಿನ್ನುತ್ತಿರುವಾಗ ಚಳಿಯ ಕಾಟ ತಾಳದೆ ಮಂಜು (fog) ನಮ್ಮ ಕೆನ್ನೆ ಸವರಿ ಪುರಿ ಕದ್ದು ತಿನ್ನುತಿದೆಯೇನೋ ಅನಿಸುತ್ತಿತ್ತು...



Home Stay

ಹೊಟ್ಟೆ ತುಂಬಾ ತಿಂದಿದ್ದಾಯ್ತು.. ಟ್ರೆಕ್ಕಿಂಗ್ ಹೊರಡಲು ತುದಿಗಾಲಲ್ಲಿ ನಿಂತಿರುವ ಈ ಗುಂಪಿನ ಹುಮ್ಮಸ್ಸು ನೋಡಿದರೆ ಹಿಮಾಲಯವನ್ನೇ ಹತ್ತಿದರೆ ಹತ್ತಿ ಬಿಟ್ಟಾರು ಈ ಮಹಾನುಭಾವರು ಎಂದೆನಿಸುತ್ತಿತ್ತು...


ಮಳೆಯಾಗಿರೋದ್ರಿಂದ ನೀವು ಕಲ್ಲಥಗಿರಿಯಿಂದ ಕಲ್ಲಥಗಿರಿ ಜಲಪಾತಕ್ಕೆ ಚಾರಣ ಮಾಡಲಾಗುವದಿಲ್ಲ ಅಂತ ಹೇಳಿದರು. ಅರ್ರೇ ಮಳೆಯಾದರೆ ಏನಂತೆ ನಾವು ಬೆಟ್ಟ ಹತ್ತೇ ತೀರುತ್ತೇವೆ ಅಂತ ನಾವು ಅನ್ನುತಿರಬೇಕಾದ್ರೆ ಅವರು ಹೇಳಿದರು  ಹೌದ್ರೀ ನೀವು ಬೆಟ್ಟ ಹತ್ತುತ್ತೀರಿ ಆದರೆ ಇವಾಗ ಅಲ್ಲಿ  ಮಳೆಯಿಂದಾಗಿ ದಾರಿ ಅಷ್ಟೊಂದು ಸರಿ ಇಲ್ಲ ಮೇಲಾಗಿ ಜಿಗಣೆಗಳ(Leeche) ಕಾಟ ಬೇರೆ ಜಾಸ್ತಿ ಆಗಿದೆ. ಹೌದಾ ಸರಿ ಹಾಗಾದರೆ ಬೇರೆ ಮಾರ್ಗವಿದ್ದರೆ ನಮ್ಮನ್ನು ಆ ಜಲಪಾತಕ್ಕೆ ಕರೆದುಕೊಂಡು ಹೋಗಿ ಅಂತ ಹೇಳಿದೆವು... ಆ ಜಲಪಾತಕ್ಕೆ ಹೋಗಲು ಇನ್ನೊಂದು ಬೇರೆ ಮಾರ್ಗವಿದೆ ಆ ಮಾರ್ಗವಾಗಿ  ಹೋಗಿ, ಸ್ವಲ್ಪ ಜಿಗಣೆಗಳ ಕಾಟ ಇರುತ್ತೆ ಆದರೆ ಚಾರಣ ಮಾಡಬಹುದು ಅಂದರು.
ನಮ್ಮ ಜೊತೆ Jamesನಾ ಕಳುಹಿಸಿಕೊಟ್ಟರು.. ಅವನು ಮುಂದೆ ದಾರಿ ತೋರಿಸುತ ಸಾಗಿದ, ಎಲ್ಲರೂ ಅವನನ್ನೇ ಹಿಂಬಾಲಿಸುತ್ತಾ ಆ ದಟ್ಟವಾದ ಕಾಫಿ ಎಸ್ಟೇಟಿನೊಳಗೆ ಹಾದು ಹೊರಟಿತು ಮೊದಲ ದಿನದ ನಮ್ಮ ಈ ಟ್ರೆಕ್ಕಿಂಗ್ ಪಯಣ.. ತುಂತುರಾಗಿ ಸುರಿಯುತ್ತಿರುವ ಮಳೆಯಲಿ ನೆನೆಯುತ  ಕ್ಯಾಮೆರಾಗೆ ಪೋಸ್ ಕೊಡುತ್ತ ಮುಂದೆ ಸಾಗಿದೆವು.. ಆ ಕಾಡಿನ ಸೌಂದರ್ಯದ ಸೊಬಗನ್ನು ತುಂತುರು ಮಳೆಯ ಜೊತೆ ಸವಿಯುತಿರುವ ನುಭವವೇ ಬೇರೆ..  ಮಳೆಗಾಲದಲ್ಲಿ ಬೆಟ್ಟದ ಮೇಲೆ ಕುಳಿತು ಚಳಿಯಲಿ ನಡುಗುತ ಸಕ್ಕತ್ತ್ ಖಾರವಿರುವ ಅಂದರೆ ಬ್ಯಾಡಗಿ ಮೆಣಸಿನಕಾಯಿಯ ಗರಮಾ ಗರಂ ಭಜ್ಜಿ ತಿಂದಂಗಿತ್ತು ಆ ಅನುಭವ.. ಒಂದೊಳ್ಳೆ ಹೊಸ ಅನುಭವ.. ಮಲೆನಾಡಿನವರಿಗೆ ಅದೊಂದು ಜೀವನದ ಒಂದು ಸಾಧಾರಣ ವಾತಾವರಣವಿದ್ದಂತೆ ಆದರೆ ಈ ನಮ್ಮ ಉತ್ತರ ಕರ್ನಾಟಕದ ಜನರಿಗೆ ಅದೊಂದು ಅದ್ಭುತವೆ ಸರಿ.. ಹೋ ಅದರಲ್ಲೇನು ಅದ್ಭುತವಿದೆ ಅಂತೀರಾ?
ಕೇಳ್ರಿ  ಹೇಳ್ತೀನಿ ನಮ್ಮೊರ್ ಕಡೆಗೆ ಮಳೆ ಆಗೋದೇ ಕಡಿಮೆ.. ಅಪ್ಪಿ ತಪ್ಪಿ ಮಳೆ ಬಂದಿದೆ ಅಂದ್ರ ಅದು ಒಂದು ವಾರ ಇಲ್ಲಾ ಅಂದ್ರ ಒಂದೂವರೆ ವಾರ ಅಷ್ಟಾ ಬರ್ತಾದ.. ಅವನೌನ ಈ ಮಲೆನಾಡಿನ ಕಡೆಗೆ ಎಷ್ಟ್ ಮಳಿ ಬರ್ತಾದ ನಮ್ ಕಡೆಗೆ ಅದರ ಒಂದ್ ಅರ್ಧದಷ್ಟರ ಬರಬಾರದಾ ಅದು.. ಹೋಗ್ಲಿ ಪಾ ಅರ್ಧಾ ಬ್ಯಾಡೋ ಮಾರಾಯ ಒಂದ್ ಚಾರಾಣೆಯಷ್ಟು ಬಂದ್ರ ಸಾಕ್ ರೀ ಅದರಲ್ಲೇ ತೃಪ್ತಿ ಪಟ್ಕೊಂಡು ರಾಜರಂಗೆ ಜೀವನ ನಡೆಸ್ತೀವಿ ನಾವೇನು  ಬಾಳ್ ಕೇಳಾಕ ಹೋಗಾಂಗಿಲ್ಲ... 
ಮಳೆ ಇಲ್ದಾ ಬರೀ ಬರಗಾಲನೆ ತುಂಬಿದೆ... ಬೇರೆ ಕಡೆ ಮಳೆಗಾಲ ಶುರುವಾಗಿದ್ದರೂ ಕೂಡ ನಮ್ ಕಡೆ ಕೆಲವೊಂದು ಹಳ್ಳಿಗಳಿಗೆ ಇನ್ನು ಟ್ಯಾಂಕರಿನಲ್ಲಿ ಕುಡಿಯುವ ನೀರು ಸರಬರಾಜು ಮಾಡ್ತಾರ.. ಅದೆಲ್ಲ ನೆನಿಸಿಕೊಂಡರ ಮನಸ್ಸಿಗೆ ಬಾಳ  ಬ್ಯಾಸರ ಬರ್ತಾದ್ರೀ... ನಮ್ಮದು ಯಾವ ಕಡೆ ನೋಡಿದರೂ ಬಯಲು ಸೀಮೇನೆ... ಒಂದೂರಿನ ಹೊರಗೆ ನಿಂತು ಪಕ್ಕದ ಊರಿನ ಕಡೆಗೆ ಹಾಗೆ ಸುಮ್ಮನೆ  ಕಣ್ಣಾಡಿಸಿದರ ನಿಮಗ ಮುಂದಿನ ಊರೇ ಕಾಣಿಸ್ತಾದ.. ಹಂಗೆ ನಮ್ ಉತ್ತರ ಕರ್ನಾಟಕದ ಗತಿ...  ಬಯಲು ಸೀಮೇನೆ ನೋಡಿದವರಿಗೆ ಒಮ್ಮೆಗೆ ಇಂತಹ ಸುಂದರ ಪ್ರಕೃತಿಯ ಹಸುರನ್ನು ನೋಡಿದರೆ ಎಂತಹ ಸಂತೋಷವಾಗಬೇಡ?  
ಸ್ವಲ್ಪ ಊಹಿಸಿಕೊಳ್ಳಿ ಅದೇ ಅನುಭವ ನಂಗು ಆಯ್ತು.. 


Garama Garam Chai


Bhootnath..!!!!




Journey started


On the way to Kallathagiri Falls


ಹಾಗೆ ಮುಂದೆ ಸಾಗುತ ಸಾಗುತ ಕಾಡಿನೊಳಗೆ ಹಾದು ಒಂದು ಚಿಕ್ಕ ದಾರಿಯಲಿ ಸಾಗಿತು ನಮ್ಮ ಪಯಣ... ಅದೊಂದು ದಟ್ಟ ಅರಣ್ಯ ಪ್ರದೇಶ ಮತ್ತು ಮುಂದೆ ಸಾಗಲು ಒಬ್ಬರೇ ಹಾದು ಹೋಗುವಷ್ಟು ಚಿಕ್ಕ ದಾರಿ ಅದು. ಪಕ್ಕಾ ದಾರಿ ಅಲ್ಲಾ ರೀ.. ಯಾರೋ ಯಾವಾಗಲೋ ಹಾದು ಹೊಗಿರಬೇಕೆನಿಸುತ್ತದೆ.. ಸ್ವಲ್ಪ ಸ್ವಲ್ಪ ದಾರಿ ಹಾಗೆ ಕಾಣಿಸುತ್ತಿತ್ತು.. ಸಮುದ್ರದಲ್ಲಿ ಮುಂದೆ ಹೋಗಲೊಂದು ದಿಕ್ಸೂಚಿ ಸಿಕ್ಕರೆ ಹೆಂಗೆನೋ ಹಂಗೆ ನಮಗೆ ಈ ದಾರಿ ಒಂದು ದಿಕ್ಸೂಚಿ ದಾರಿ ಹಾಗೇನೆ ಕಂಡಿತು... 
ಮಳೆಯಾಗಿ ಮುದ್ದೆಯಾಗಿರುವ ಮಣ್ಣಿನ ದಾರಿಯಲಿ ನಡೆದು ಹೋಗುತ್ತಿರಬೇಕಾದರೆ ನಮಗೆ ಗೊತ್ತಿಲ್ಲದೇ ನಮ್ಮ ಕಾಲುಗಳಿಗೆ ಚುಂಬಿಸಿ ನಮ್ಮ ರಕ್ತವನ್ನು ಕಳ್ಳ ಜಿಗಣೆಗಳು ಕುಡಿದಿದ್ದೆ ಕುಡಿದಿದ್ದು. ಜಿಗಣೆಗಳ ಆಯುರ್ವೇದಿಕ್ treatment ನೊಂದಿಗೆ ಕಾಲು ಜಾರುತಿರುವ ಆ ವದ್ದೆ ದಾರಿಯಲಿ ಎದ್ದು ಬಿದ್ದು ಕಲ್ಲಥಗಿರಿ ಜಲಪಾತ ತಲುಪಿದೆವು...


On the way to Kallathagiri Falls






Leech=Neech


ಹಾಗೆ ಸುಮ್ಮನೆ 


@ Kallathagiri Falls


@ Kallathagiri Falls


@ Kallathagiri Falls


ಜಿನಿ ಜಿನಿ ಮಳೆಯಲಿ ತಣ್ಣನೆ chilled ಜಲಪಾತದಿಂದ ಧುಮ್ಮುಕ್ಕಿ ಬರುತ್ತಿರುವ ಜಲಧಾರೆಯ ಕೆಳಗೆ ನಿಂತು ಯಾಹೂ...!!! ಅಂತ ಚೀರುತ ನೀರಿನಲ್ಲಿ ಮಿಂದೆವು... ಅಲ್ಲೇ ಸ್ವಲ್ಪ ಸಮಯ ಜಲಪಾತದ ಕೆಳಗೆ ಮಸ್ತ್ ಮಜಾ ಮಾಡೋದರೊಳಗೆ. ಹೊಟ್ಟೆ ಚುರುಗುಡಲು ಶುರುವಿಟ್ಟಿತು.. ಬೆಳಿಗ್ಗೆ ತಿಂದಿರೋದೆ ಇನ್ನೂ ಕರಗಿರಲಿಲ್ಲ ಆದರೆ ಆ ಕಾಡಿನ ಮನೆಯ ಅಡುಗೆಗೆ ಹೊಟ್ಟೆ ಕೂಡ ಮನಸೋತು ಹೋಗಿತ್ತು.. ಬೆಂಗಳೂರಿನಲ್ಲಿ ದಿನ ಬೆಳಗಾದರೆ ಆ ಉಪ್ಪಿಲ್ಲದ ಖಾರವಿಲ್ಲದ ಸಪ್ಪನೆಯ ಊಟ ತಿಂದು ತಿಂದು ರುಚಿಯಾವದು, ಖಾರ ಯಾವದು ಅಂತ ಮರೆತಿರುವ ನಾಲಗೆಗೆ ಹೊಸದೊಂದು ರುಚಿಯ ತೋರಿಸಿ ಮರು ಜೀವ ಬಂದಾಗಿತ್ತು.
ಅಲ್ಲಿಂದ ಹೊರಟು ಮಧ್ಯಾನದ  ಊಟಕ್ಕೆ ಎಸ್ಟೇಟ್ ಗೆ ಬಂದೆವು.. ನಾವು ಬರೋದರೊಳಗೆ ಅಡುಗೆ ತಯಾರಾಗಿತ್ತು... ಕೈ ಕಾಲು ತೊಳೆದುಕೊಂಡು ಬಂದು ಊಟಕ್ಕೆ ಕುಳಿತರೆ ಆಹಾ..!! ಘಮ್ಮೆನ್ನುವ ವಾಸನೆ.... ನೋಡಿದರೆ ಚಿಕ್ಕೆನ್ ಬಿರಿಯಾನಿ ಮತ್ತು ವೆಜ್ ಬಿರಿಯಾನಿ, ವೈಟ್ ರೈಸ್ ಮತ್ತು ಹಪ್ಪಳ ಕೈ ಮಾಡಿ ಕರೆಯುತ್ತಿದ್ದವು... ಮತ್ತೆ  ಹೊಟ್ಟೆ ತುಂಬಾ ಮೃಷ್ಟಾನ್ನ ಭೋಜನವಾಯಿತು... 


kaise explain Karoon..!!!!


Hmm yummy taste



ಇನ್ನೇನು ಎದ್ದು ಕೈ ತೊಳೆದುಕೊಳ್ಳೋಣ ಅನ್ನೋದ್ರೊಳಗೆ ಮತ್ತೊಂದು ಸುಮಧುರ ಘಮ್ಮೆನ್ನುವ ವಾಸನೆ ಮೂಗನು ಅರಸುತ ಬಂದಿತು.. ಏನೆಂದು ನೋಡಲು ಶಾವಿಗೆ ಪಾಯಸ....!!!!!!
ಪಾಯಸ ಮಾತ್ರ ಇನ್ನೂ ಸಕ್ಕತ್ತಾಗಿತ್ತು. ಒಂದು ಕುಡಿತೆ ಹೆಜ್ಜೇನು ಕುಡಿಯುವುದೂ ಸಮ; ಹೆಜ್ಜೆನೂ ಸುಳ್ಳು;  ಅದರ ಮುಂದೆ ಕಬ್ಬಿನ ಕೆನೆ ಬೆಲ್ಲವೂ ಸುಳ್ಳು! ಎಷ್ಟು ರುಚಿಯೇನ್ನುತ್ತೀರಿ..!  ಎಲ್ಲರೂ ಎರಡೆರಡು ಬಟ್ಟಲಂತೆ ಪಾಯಸವನ್ನು ಸ್ವಾಹಾ ಮಾಡಿದರು.

Paayasa

ಕಣ್ಣುಗಳು ಮಾತ್ರ ಒಂದು ಹಾಸಿಗೆ ಕೊಟ್ಟರೆ, ಬೇಡ ಈ ಹಸುರಿನ ಹೊದಿಕೆಗೆ ಹಾಸಿಗೆ ಏಕೆ ಬೇಕು.. ಹಾಗೆ ಸ್ವಲ್ಪ ಇಲ್ಲೇ ಒರಗಿಕೊಂಡು ಮಲಗಿದರೆ ಸಾಕು ಅಂತ ಚಿಂತಿಸುತ್ತಿರಬೇಕಾದರೆ ಮನಸ್ಸು ಹೇಳಿತು ಲೋ ದಡ್ಡ ಕಣ್ಣೆ, ಈ ಮನುಷ್ಯ ಇಲ್ಲಿಗೆ ಬಂದಿರೋದು ಟ್ರೆಕ್/ಪ್ರವಾಸ ಮಾಡಲು.. ಅಂತಾದರಲ್ಲಿ  ನೀನು ಹೀಗೆ ನಿದ್ದೆ ಮಾಡ್ತೀನಿ ಅಂದರೆ ಬಿಡ್ತಾನೆಯೇ? ಅಯ್ಯೋ ಏನ್ ಹೇಳ್ತಿ ಬಿಡು ಮನಸಣ್ಣ  ಈ ಮನುಷ್ಯ ಬರೀ ತನ್ನ ಸ್ವಾರ್ಥ ನೋಡ್ತಾನೆ.. ಏನ್ ಮಾಡಾಕಾಯ್ತದೆ ಮಲಗೋದಿಲ್ಲ ಬಿಡು...!!!!!
ಅಷ್ಟರಲ್ಲೇ ಮಧ್ಯಾನದ  ಪ್ರವಾಸದ ಪ್ಲಾನ್ ತಯಾರಿತ್ತು. ಮೊದಲು ಕೆಮ್ಮನಗುಂಡಿಗೆ ಹೋಗೋಣ ಬರೋವಾಗ ಕಲ್ಲಥಗಿರಿಯಲ್ಲಿರೋ ದೇವಸ್ಥಾನಕ್ಕೆ ಹೋದರಾಯಿತು.
ಅಲ್ಲಿಂದ ಹೊರಟು ಕೆಮ್ಮನಗುಂಡಿಗೆ ತಲುಪಿದೆವು... ನಾವಿರುವ ಎಸ್ಟೇಟ್ ತಗ್ಗು ಪ್ರದೇಶದಲ್ಲಿತ್ತು.. ಆದರೆ ಕೆಮ್ಮನಗುಂಡಿ ಇರೋದು ದೊಡ್ಡ ಬೆಟ್ಟ.. ಬೆಟ್ಟದ ಮೇಲೆ ಬಂದಾಗ.. ಮೋಡಗಳು ಕೆನೆ ಹಾಲಿನ ಹಾಗೆ, ಬೆಳ್ಳಗೆ ಬೆಣ್ಣೆಯಂತೆ ಅತಿ ವೇಗವಾಗಿ ನಮ್ಮನ್ನು ತಾಗಿ ಹಾಗೆ ಮುಂದೆ ಹೋಗುತಿದ್ದವು... ದೂರದಲ್ಲಿ ನೋಡಿದರೆ ಏನು ಕಾಣಿಸುತಿರಲಿಲ್ಲ.. ತುಂಬಾ ಹತ್ತಿರ ಅಂದರೆ ಸುಮಾರು 5 ರಿಂದ 10 ಮೀ ದೂರದಲ್ಲಿರೋದು ಮಾತ್ರ ಕಾಣಿಸುತ್ತಿತ್ತು. ಅಲ್ಲೇ ಸ್ವಲ್ಪ ಸಮಯ ಕಳೆದು Z-Point  ಗೆ ಹೋಗೋಣ ಅಂತ ಹೊರಟೆವು... Z-Point  ದಾರೀಲಿ ಸುಮಾರು 2 ಕಿ.ಮೀ  ಸಾಗಿರಬೇಕು ಶುರುವಾಯಿತು ನೋಡ್ರಿ ಜಿಗಣೆಗಳ ಆರ್ಭಟ.. ಮುಂದೆ ಹೋಗಲು ದಾರಿನೇ ಬಿಡುತ್ತಿಲ್ಲ.. ತುಂಬಾ aggressive ಆಗಿ ನಮ್ಮ ಮೇಲೆ ಆಕ್ರಮಣ ಮಾಡುತ್ತಿದ್ದವು. ಆ ಆಕ್ರಮಣಕ್ಕೆ ನಾವು ಸೋಲಬೇಕಾಯಿತು.. ಆದರೆ ಅಜಿತಾ, ಸರ್ಕಾರ್ ಮತ್ತು ಸಂತೋಷ್  ಮಾತ್ರ Z-Point ತುದಿಯವರೆಗೂ ಹೋಗಿ ಬಂದರು...ಸಂಜೆಯಾಗುತಿರುವ ಕಾರಣ ಅಲ್ಲಿಂದ ಕಲ್ಲಥಗಿರಿ ದೇವಸ್ಥಾನಕ್ಕೆ ಹೊರಟೆವು.. ಕಾಡಿನಲ್ಲಿ ಬರುತಿರಬೇಕಾದರೆ ವಾಯುಪುತ್ರನು ಮೊಡಗಳನ್ನು ಆ ಬೆಟ್ಟದಿಂದ ಹೊತ್ತು ತಂದು ಕೆಳಗಡೆ ಸುರಿಯುತ್ತಿರುವದನ್ನು ಕಣ್ಣಾರೆ ಕಂಡು ಪ್ರಕೃತಿಯ ವೈಶಿಷ್ಟ್ಯಕ್ಕೆ ಮನಸೋತೆವು.  ಈ ಸೌಂದರ್ಯವನ್ನು ನೋಡುತಿದ್ದರೆ ಈ ಬಯಲಿನ ಹಸುರು, ಬೆಟ್ಟದ  ನೀಲ, ಬಾನಿನ ಬೆಡಗುಗಳನ್ನೆಲ್ಲ ನೋಡಿ ಇಲ್ಲಿಯೇ ಇರಬೇಕು ಎನಿಸುತ್ತಿತ್ತು..ಕಲ್ಲಥಗಿರಿ ದೇವಸ್ಥಾನಕ್ಕೆ ಹೋಗಿ.. ಅಲ್ಲಿರುವ ಚಿಕ್ಕ ಜಲಪಾತವನ್ನು ನೋಡಿ ಅಲ್ಲೇ ಒಂದು ಹೋಟೆಲಿನಲ್ಲಿ ಚಹಾ ಕುಡಿದು ಮರಳಿ ಎಸ್ಟೇಟ್ ಗೂಡಿಗೆ ಸೇರಿದೆವು...


@ Kemmanagundi



@ Kemmanagundi


@ Kemmanagundi


@ Kemmanagundi


@ Kemmanagundi


@ Z-Point



@ Kemmanagundi


@ Kallathagiri Temple


@ Kallathagiri Temple



ಸಂಜೆಗೆ ಬಿಸಿ ಬಿಸಿ ಕಾಫಿ ಜೊತೆ ಮಿರ್ಚಿ ಬಜ್ಜಿ ಬಂತು.. ಅದನ್ನು ತಿಂದು ಕಾಫಿ ಕುಡಿದೆವು... ರಾತ್ರಿ ಊಟಕ್ಕೆ ಇನ್ನು ಸಮಯವಿರೋದ್ರಿಂದ ಒಬ್ಬರಿಗೊಬ್ಬರ ಪರಿಚಯದ ಸಭೆ ನಡೆಯಿತು... ಒಬ್ಬೊಬ್ಬರಾಗಿ ತಮ್ಮ ಪರಿಚಯವನ್ನು ಸಹಚಾರಣಿಗರಿಗೆ ಹೇಳಬೇಕಾಗಿತ್ತು... ಒಬ್ಬೊಬ್ಬರಾಗಿ ತಮ್ಮ ತಮ್ಮ ಪರಿಚಯ ಹೇಳತೊಡಗಿದರು.. ಅವರು ಹೇಳುವ ಪ್ರತಿ ಶಬ್ದವನ್ನು ತಗೆದುಕೊಂಡು ಕಾಮಿಡಿ ಮಾಡಿದ್ದೆ ಮಾಡಿದ್ದು.. ಈ ಮೀಟಿಂಗ್ ಮಾತಾ ಸೂಪರ್ ಆಗಿತ್ತು.. ಅದರ ವಿವರವನ್ನು ಹೇಳಲಾಗೋದಿಲ್ಲ...!!! ಯಾಕೆಂದರೆ conditions apply.... 
ಅದೆಲ್ಲ ಮುಗಿಯುವದರೊಳಗೆ Barbecued chicken ತಯಾರಾಗುತ್ತಿರುವದ ವಾಸನೆ ನಮ್ಮನ್ನರಸಿ ನಮ್ಮ ರೂಮೊಳಗೆ ಬಂದಿತು.. . ಅದನ್ನು ತಿಳಿಯುತ್ತಿರುವಂತೆ ಎಲ್ಲರೂ ಅಲ್ಲಿಗೆ ಲಗ್ಗೆ ಇಟ್ಟರು...!!!!


Barbecue chicken getting ready


Fighting for Barbecue chicken
they are having chicken..!! where is veg food????




chicken ತಯಾರಾಗಿ ಒಂದೊಂದೇ ಇವರ ಬಾಯಿಗೆ ಹೋಗತೊಡಗಿದವು.. ಅಷ್ಟರೊಳಗೆ ಊಟ ತಯಾರಾಗಿ ಟೇಬಲ್ ಗೆ ಬಂದಿತು... ಹ್ಮ್ ನೋಡಿದರೆ ಚಿಕನ್, ಅಕ್ಕಿ ಕಡುಬು, ಗ್ರೇವಿ, ಗೋಬಿ ಮಂಚೂರಿ, ಕಲರ್ ಮತ್ತು ವೈಟ್ ರೈಸ್... ರಾತ್ರಿ ಕೂಡ ಮೃಷ್ಟಾನ್ನ ಭೋಜನ ಮಾಡಿದೆವು... ಬೆಳಿಗ್ಗೆ ಬೇಗ ಎದ್ದು ಇಲ್ಲಿಂದೆ ಹೊರಟರೆ ತುಂಬಾ ಸ್ಥಳಗಳನ್ನು ನೋಡಬಹುದು ಅಂತ ಬೇಗ ಮಲಗಿದೆವು.. ಇಲ್ಲಿಗೆ ಒಂದನೇ ದಿನದ ಅಂದರೆ ಶನಿವಾರದ ಪ್ರವಾಸ ಮುಗಿತು. 
ಶುಭ ರಾತ್ರಿ...:)

ದಿನ 2;- 

ರವಿವಾರ ಬೆಳಿಗ್ಗೆ ಬೇಗ ಎದ್ದು ಎಲ್ಲರೂ ತಾಯರಾಗಿ ಮುಳ್ಳಯನಗಿರಿ ಬೆಟ್ಟದ ಚಾರಣ ಮಾಡೋಕೆ ಹೋಗಲು ತುದಿಗಾಲಲಿ ನಿಂತತರು. ಬೆಳಿಗ್ಗೆ ಅಲ್ಲಿ ನಾಷ್ಟ ತಯಾರಾಗೋದು ತಡವಾಗುತ್ತೆ ಅಂತ ಹೇಳಿರೋದರಿಂದ  ನಾಷ್ಟ ಬೇಡ ಅಂತ ಹೇಳಿ ಅಲ್ಲಿಂದ  ಬೆಳಿಗ್ಗೆ 7 ಕ್ಕೆ ಹೊರಟೆವು.. ಸ್ವಲ್ಪ ದೂರ ಕ್ರಮಿಸಿದ ನಂತರ ಬೆಳಗಿನ ಹೊಟ್ಟೆಗಳು ನಾಷ್ಟಾಕ್ಕಾಗಿ ಹಾತೊರೆಯಲು ಶುರುವಿಡಬೇಕೇ... ಹಿಂದಿನ ದಿನ ತಂದಿರೋ ಬ್ರೆಡ್ ಗೆ ಜಾಮ್ ಹಚ್ಚಿಕೊಂಡು ತಿಂದು ಹೊಟ್ಟೆಗೆ ಸ್ವಲ್ಪ ಶಾಂತವಾಗಿರು ಅಂತ ಹೇಳಿದೆವು...

@ Home stay



ಮಾರ್ಗಮದ್ಯ ಒಂದು ಹೋಟೆಲಿನಲ್ಲಿ ಚಹಾ ಕುಡಿದು ಮುಳ್ಳಯನಗಿರಿ ಕಡೆಗೆ ಸಾಗಿತು ನಮ್ಮ ಪಯಣ...  ಕಾಡಿನ ದಾರಿಯಲಿ ಸಾಗುತ ಸರ್ಪ ದಾರಿಯನು ಬಂದು ತಲುಪಿತು ನಮ್ಮ ಈ ಟ್ರೆಕ್ಕಿಂಗ್ ಗುಂಪು... ಹಿಂದಿನ ದಿನದ ಜಿಗಣೆಗಳ ಆರ್ಭಟದ ಗಾಯ ಇನ್ನು ಮಾಸಿರಲಿಲ್ಲ ಆದ ಕಾರಣ ಕೆಲವೊಬ್ಬರು ಟ್ರೆಕ್ಕಿಂಗ್ ಬರೋಕೆ ಹಿಂದೆ ಮುಂದೆ ನೋಡಿದರು..

@ sarpadhari

@ Mullayanagiri



ಆದರೆ ಅಜಿತಾ, ವೀರು, ಸಂತೋಷ್, ಸರ್ಕಾರ್, ನಮನ್ ಮತ್ತು ನಾನು ಟ್ರೆಕ್ಕಿಂಗ್  ಮಾಡಿಯೇ ಬಿಡೋದು ಅಂತ ರೆಡಿ ಆದೆವು.. ಉಳಿದವರು TT ಯಲ್ಲಿ ಮತ್ತು ನಾವು ಟ್ರೆಕ್ಕಿಂಗ್  ಮಾಡೋದು ಅಂತ ಎರಡು ಗುಂಪುಗಳಾಗಿ ಮಾಡಿದೆವು.. ಒಂದು ಗುಂಪು TT ಯಲ್ಲಿ ಹೋಗಿ ಮುಳ್ಳಯನಗಿರಿ ಬೆಟ್ಟದ ಮೇಲೆ ಹತ್ತೋದು ಮತ್ತು ಇನ್ನೊಂದು ಗುಂಪು ಟ್ರೆಕ್ಕಿಂಗ್ ಮಾಡಿ ಅಲ್ಲಿಗೆ ಬಂದು ಎಲ್ಲರೂ ಮತ್ತೆ ಒಟ್ಟಿಗೆ ಸೇರೋದು ಅಂದುಕೊಂಡೆವು.  ನಮ್ಮ ಟ್ರೆಕ್ಕಿಂಗ್ ಗುಂಪು  ಮಾತ್ರ ತುಂಬಾ ಹುಮ್ಮಸ್ಸಿನಲ್ಲಿತ್ತು .. Ready, Steady, Go ಅಂತ ಚಾರಣ ಶುರು ಮಾಡಿದೆವು... ಸ್ವಲ್ಪ ಮೇಲೆ ಹತ್ತುತಿರಬೇಕಾದರೆ ಬೀಸುತಲಿತ್ತು ನೋಡ್ರಿ ಮಂಜಿನ ಹನಿಗಳು ತಣ್ಣನೆ  ಗಾಳಿಯಲಿ ತೇಲಿ ಬಂದು ನಮ್ಮನ್ನು ಮುದ್ದಿಸಿ ಹೋಗುತಿದ್ದವು... ತುಂತುರು ಮಳೆಯಲಿ ನೆನೆಯುತ ಜಿಗಣೆಗಳೆನಾದರು  ಇವೆಯಾ ಅಂತ ಆ ಕಡೆ ಈ ಕಡೆ ನೋಡುತ ಬೆಟ್ಟ ಹತ್ತುತ್ತಿದ್ದೆವು. ಬೆಟ್ಟ ಹತ್ತಿದ ಹಾಗೆಲ್ಲ ಬೆಟ್ಟದ ಸೌಂದರ್ಯ ಮಾತ್ರ ಹೆಚ್ಚಾಗುತ್ತಲೇ ಇತ್ತು.. ಅರ್ಧ ಬೆಟ್ಟ ಕ್ರಮಿಸಿರಬೇಕು ಆವಾಗ ಸ್ವಲ್ಪ ಬಿಸಿಲು ಕಾಣಿಸಿತು, 




@ Mullayanagiri


@ Mullayanagiri


@ Mullayanagiri


@ Mullayanagiri


ಬಾನಿನಲ್ಲಿ ಸೂರ್ಯನು ತುಸುವಾಗಿ ಮೇಲಕ್ಕೇರುತ್ತಾನೆ - ಎಂದಂತೆ  ಒಮ್ಮೆಗೆ ಅವನ ರಶ್ಮಿಗಳು ಬೆಟ್ಟದ ತೆಂಕು ಮಗ್ಗುಲಿನ ಹಸುರನ್ನೆಲ್ಲ ಬೆಳಕಿನಿಂದ ತೊಯ್ಯಿಸಿಬಿಟ್ಟವು. ಆ ಅಪೂರ್ವದ ನೋಟವು ಎಂದೂ ಮರೆಯುವಂತದಲ್ಲ.. ಆ ತನಕ ಕಠಿಣವೂ ನಿರ್ದಾಕ್ಷಿಣ್ಯವೂ ಆಗಿ ನಿಂತ ಬೆಟ್ಟಕ್ಕೆ ಒಂದು ಬದಿಯಲ್ಲಿ ಮೃದುವಾದ ಹೃದಯವಿದ್ದಂತೆ ಕಂಡಿತು. ನೋಡುತ್ತಾ ನಿಂತಂತೆ, ಕೆಂಪಡರಿದ ಬಾನಿನ ಕಣ್ಣು ಕ್ರೂರವಾಗುತ್ತ ಬೆಂದ ಕಬ್ಬಿಣವನ್ನು ಕರಗಿಸಲು ಬಂದಂತೆ ಕಾಣಿಸಿತು. ಆ ಬಾನಿನ ಮುಂದೆ, ಬೆಟ್ಟವು ಗಂಡುಗಲಿಯಂತೆ ಈ ತನಕ ಕಂಡುದು, ನಮ್ರತೆಯ ಮುದ್ದೆಯಾದ ಹೆಣ್ಣಾಯಿತು. ಹಸುರು ಕವಚದ ಮೇಲೆ ನೇರ ಸೀರೆ ತೊಟ್ಟು ಬೆಟ್ಟಕ್ಕೆ ನಿಂತ ಅಂಗನೆಯಾಯಿತು. ಆದರೆ ದಿಗಂಗನೆಯ ಧಿಮಾಕಿನ ಮುಂದೆ ಬೆಟ್ಟದಂಗನೆ, ಅತ್ತೆಯ ಮುಂದೆ ನಾಚಿಕೊಂಡು ನಿಂತ ಸೊಸೆಯಾದಳು. 



@ Mullayanagiri


@ Mullayanagiri


@ Mullayanagiri


@ Mullayanagiri


@ Mullayanagiri

@ Mullayanagiri


@ Mullayanagiri



Mullayanagiri is "Highest Peak in Karnataka"


ಮತ್ತೆ ಸ್ವಲ್ಪ ಸಮಯದ ನಂತರ ಸೂರ್ಯನು ಮಂಜಿನ ಮೋಡಗಳ ಹಿಂದೆ ಮರೆಯಾದನು. 
ಬೆಟ್ಟ ಹತ್ತೋವಾಗ ಯಾರಾದರು ಬೇರೆ ಗುಂಪಿನ ಜನರಿದ್ದಾರೆಯೇ ಎಂದು ನೋಡಿದರೆ ಯಾರು ಇಲ್ಲ.. ಆ ದಟ್ಟವಾದ ಮಂಜಿನಲಿ ಏನು ನೋಡಿದರು ಕಾಣಿಸದು.. ಬರಿ ಮಂಜಿಂದ ಕೂಡಿದ ಮೋಡಗಳು... ಬಿರುಸಾಗಿ ಬೀಸುವ ಗಾಳಿಯಲಿ ಹಾಯಾಗಿ ತೇಲಿಕೊಂಡು ಹೋಗುತಿದ್ದವು. 

ಹಾಗೆ ಹೀಗೆ ಮಾಡಿ ನಾವು ಒಂದು ಘಂಟೆ ಹತ್ತು ನಿಮಿಷಗಳಲ್ಲಿ ಮುಳ್ಳಯನಗಿರಿ ಬೆಟ್ಟದ ಚಾರಣ ಮುಗಿಸಿದ್ದೆವು... 
ಬೆಟ್ಟದ ತುದಿಯ ಮೇಲೆ ಹೋಗಿ ನಿಂತರೆ ಆ ಹಿಮವೆನ್ನುವ ಹಾಗಿರುವ ಇಬ್ಬನಿಯ ಹನಿಗಳು ಆ ರಭಸದ ಗಾಳಿಯಲಿ ಸುಮಾರು ಪ್ರತಿ ಘಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಸುಂಯ್ಯನೆ ನಮ್ಮನ್ನು ತಮ್ಮ ಜೊತೆಗೆ ಬಾ ಎನ್ನುವಂತೆ ಬೀಸುತಿರಲು  ಮನಸಿಗೆ ಏನೋ ಒಂದು ತರಹದ ಆಹ್ಲಾದಕರ ಮತ್ತು ತೃಪ್ತಿ.

@ Mullayanagiri

@ Mullayanagiri

Having Garama Garam Bhajji @ Mullayanagiri

@ Mullayanagiri

@ Mullayanagiri

@ Mullayanagiri

@ Mullayanagiri

ಆದರೆ ನೀವೇನೇ ಹೇಳಿ, ಇಂಥಹ ಕರ್ನಾಟಕದಲ್ಲೇ ಎತ್ತರವಾದ ಗುಡ್ಡದ ತುದಿಯನ್ನೆರಿದರೆ, ಮುಳ್ಳಯನಗಿರಿ ಬೇಡ, ನಮ್ಮ ಮನೆ ಹತ್ತಿರವೇ ಇರುವ ಚಿಕ್ಕ ಗುಡ್ದವಾಗಲೀ,  ಅಥವಾ ಇನ್ನೊಂದು ಚಿಕ್ಕ ಗುಡ್ದವಾಗಲಿ, ಅವನ್ನು ಏರಿ ನಿಂತರೆ- ಮನಸ್ಸಿಗೊಂದು ಹಿಗ್ಗು ಬರುತ್ತದಲ್ಲವೆ... ನಮ್ಮಷ್ಟು ದೊಡ್ಡವರ್ಯಾರು ಎನಿಸುತ್ತದೆ... ನೂರಾರು ಜನರನ್ನು ಮೀರಿ ನಿಂತ ಹಾಗೆ ಮನಸ್ಸಿಗೊಂದು ಹೆಮ್ಮೆ ಉಂಟಾಗುತ್ತದಲ್ಲವೇ.. ನಮ್ಮ  ಮನಸುಗಳೆಲ್ಲವೂ ಈ ಮಂಜಿನ ಮೋಹಮಯ ಸೌಂದರ್ಯವನ್ನು ಕಾಣುವದರಲ್ಲಿ ಬೆರೆತು ಹೋಗಿದ್ದವು.



Time for Lunch


@ Dattapeetha/Bababudangiri

@ Dattapeetha/Bababudangiri


@ Dattapeetha/Bababudangiri


@ Manikyadhara

@ Manikyadhara

@ Manikyadhara

@ Manikyadhara

On the way back to Chikkamagaluru

On the way back to Chikkamagaluru

@ Chikkamagaluru

@ Chikkamagaluru


Chikkamagalur Tourist Map


ಇನ್ನೊಂದು ಗುಂಪು ಕೂಡ ನಮ್ಮ ಗುಂಪಿನೊಂದಿಗೆ ಬಂದು ಸೇರಿತು.. ಅಲ್ಲೇ ಸ್ವಲ್ಪ ಸಮಯ ಕಳೆದು ಮುಂದೆ ದತ್ತ ಪೀಠದ ಕಡೆ ಹೊರೆಟೆವು .. ಮಾರ್ಗಮದ್ಯ ಹೋಟೆಲೊಂದರಲ್ಲಿ ಊಟ ಮಾಡಿ ಮುಂದೆ ಸಾಗಿ ದತ್ತ ಪೀಠ ನೋಡಿದೆವು.. ಅಲ್ಲಿಂದ ಮುಂದೆ ಸಾಗಿ ಮಾಣಿಕ್ಯ ಧಾರಾಕ್ಕೆ ಹೋಗಿ .. ಮಾಣಿಕ್ಯ ಧಾರಾ ಸಣ್ಣ ಜಲಪಾತ ನೋಡಿ.. ಚಿಕ್ಕಮಂಗಳೂರಿನ ಕಡೆ ಸಾಗಿತು ನಮ್ಮ ಪಯಣ.. ದಾರಿಯಲಿ ಮತ್ತೊಂದು ಚಿಕ್ಕ ಹಳ್ಳದಂತಿರುವ ಜಲಧಾರೆಯನು ನೋಡಿ ಸಂಜೆ ಸುಮಾರು 6 ಕ್ಕೆ ಚಿಕ್ಕಮಂಗಳೂರು ತಲುಪಿದೆವು.. ಅಲ್ಲಿ ಚಹಾ ಕುಡಿದು ಬೆಂಗಲೂರಿನ ಕಡೆ ಸಾಗಿತು ನಮ್ಮ ಪಯಣ... ಹಾಸನದ ಹತ್ತಿರ ಒಂದು ಧಾಬಾದಲ್ಲಿ ರಾತ್ರಿ ಊಟ ಮಾಡಿ ಹೊರಟು ಮದ್ಯ ರಾತ್ರಿ 12 ಕ್ಕೆ ಬೆಂಗಳೂರು ಸೇರಿದೆವು.. 

ಕೃತಜ್ಞತೆಗಳು:-
ಚೈತನ್ಯಕುಮಾರ್  ಎ  ( ಟ್ರೆಕ್ಕಿಂಗ್ ವ್ಯವಸ್ತಾಪಕರು )
ಮತ್ತು ಟ್ರೆಕ್ಕಿಂಗಲ್ಲಿ  ಭಾಗವಹಿಸಿದ ಎಲ್ಲ ಸಹ ಚಾರಣಿಗರಾದ ವೀರು, ಅಜಿತಾ, ಸಂತೋಷ್,  ಚಂದ್ರಕಲಾ, ಶ್ರೀನಿವಾಸ್, ಪವನ್, ಸರ್ಕಾರ್, ವರುಣ್, ನಮನ್ 


Special thanks to:-
Vijaykumar CM (Helped in Trip info & more)
Ganesh LG (Helped in Trip info & more)
Gowri S ( Helped in editing the blog)


1 comment:

Vidya S said...

Uttara kannada shailiyalli adbhootawagi moodi bandide nimma ee shirshike!!!