Tuesday, 28 May 2013

ಮಲೆನಾಡ ಮಡಿಲಲಿ ಮನಸು ಮಿಂದಾಗ - (Trip to Shringeri 24, 25 - May - 2013)



ಪ್ರವಾಸ ಕಥನ:

ಕಳೆದ ವರ್ಷದಾಂತ್ಯಕ್ಕೆ ಮಲೆನಾಡಿಗೆ ಪ್ರವಾಸ ಕೈಗೊಂಡಿರೋ ನೆನಪು ಇನ್ನೂ ಮಾಸಿಲ್ಲ ಅವಾಗಲೇ ಮತ್ತೊಂದು ಸಧಾವಕಾಶವೊಂದು ಒದಗಿ ಬಂದರೆ ಬೇಡವೆನ್ನಲಾದೀತೇ..... 
ಈ ಬಾರಿ ನಾವು ಟ್ರಿಪ್ ಗೆ ಪ್ಲಾನ್ ಮಾಡಿಲ್ಲ..ಶ್ರಿಂಗೇರಿ ಗೆ ಹತ್ತಿರದ ಒಂದು ಊರಲ್ಲಿ ರವಿ ಕವಿಲುಹೊಳೆ ಮದುವೆ ಇರೋದ್ರಿಂದ. ಮದುವೆಗೆ ಹೋದಂಗಾಯ್ತು ಮತ್ತು ಹಾಗೆ ಒಂದಿಷ್ಟು ಮಲೆನಾಡ ಸೊಬಗನ್ನು ಕಣ್ಣಾರೆ ಕಂಡು ಕಣ್ಣುಗಳನ್ನ ತಂಪಾಗಿಸೋ ಪ್ಲಾನ್ ನೋಡ್ರಿ. 
ಆ ಮಲೆನಾಡ ಸೌಂದರ್ಯವನ್ನು ಸವಿಯಲು ಒಂದು ಜನ್ಮ ಸಾಲದು... ಅದೇನು ಹಸಿರು ಅದೇನು ಆಹ್ಲಾದಕರವಾದ ಅನುಭವ. ತಂಪಾದ ಆ ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಮಲಗಿ ಬಿಡೋಣವೆನಿಸುತ್ತೆ.. 

ದಿನ - 1:
ಶುಕ್ರವಾರ  ಮದ್ಯಾನ  2:30 ಕ್ಕೆ ಆಫೀಸಿನಿಂದ ವೋಲ್ವೋ ಬಸ್ಸಿನಲ್ಲಿ ಬೆಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಹೊರಟು ಮ. 4.15 ಕ್ಕೆ ರೈಲು ನಿಲ್ದಾಣ ತಲುಪಿದೆವು.. ತಾಳಗುಪ್ಪಾಗೆ ಹೋಗುವ ರೈಲು ಹತ್ತಿ ನಮ್ಮ ನಮ್ಮ ಆಸನಗಳನ್ನ ಹುಡುಕಿಕೊಂಡು ಅಂತೂ ಇಂತೂ ಆಸೀನರಾದ್ವಿ:)
ಮದ್ಯಾನ 4:30 ಕ್ಕೆ ಉಗಿಬಂಡಿಯಲಿ ಶುರುವಾಯಿತು ನಮ್ಮ ಮಲೆನಾಡ ಪಯಣ. 
ನಮ್ಮದು ಒಂದು ದೊಡ್ಡ ಗುಂಪು ಅಂದರೆ 22 ಜನರ ಗುಂಪು. ಎಲ್ಲರೊಂದಿಗೆ ರೈಲಲ್ಲಿ ಪ್ರಯಾಣಿಸುವದೊಂದು ಮನಸ್ಸಿಗೆ ಆಹ್ಲಾದಕರವಾದ ರುಚಿ ಸವಿದ ಅನುಭವ..
ಬೆಂಗಳೂರು ದಾಟುವದನ್ನೇ ಕಾದು ಕುಳಿತಿರೋ ಬಕ ಪಕ್ಷಿಯಂತೆ ನಮ್ಮ ಗುಂಪು UNO ಕಾರ್ಡ್ ಆಡಲು ಶುರುವಿಟ್ಟರು ನೋಡ್ರಿ... UNO Card ಗೇಮ್ ಇದೊಂದು ಟೈಮ್ ಪಾಸ್ ಆಟ.. ಆದರೆ ಒಂದು ಸಾರಿ ನೀವು ಇದನ್ನು ಆಡಲು ಶುರುಮಾಡಿದರೆ ಸಮಯ ಹೋಗಿದ್ದೆ ಗೊತ್ತಾಗೋದಿಲ್ಲ... 
ರಮ್ಯಾ ಮಾತ್ರ ಸೋಲುತಲೇ  ಇದ್ದಳು.. ಸೋಲೇ ಗೆಲುವಿನ ಸೋಪಾನ ಅನ್ನೋ ಹಾಗೆ ಸೋಲನ್ನ ಪಾಠವಾಗಿ ತಗೆದುಕೊಂಡು ನಡೆ ಮುಂದೆ ನೀ ನುಗ್ಗುತ ನಡೆ ಮುಂದೆ ಅಂತ ತಾಳ್ಮೆ ಕಳೆದುಕೊಳ್ಳದೆ ಕೊನೆಗೂ ಗೆದ್ದುಬಿಟ್ಟಳು..ಆ ಗೆಲುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ..

@Train


@Train

@Train


@Train


Playing UNO Cards


ಹ್ಹ ಹ್ಹ ಕೊನೆಗೂ ನಾ ಗೆದ್ದೇ ಬಿಟ್ಟೆ



ಅಷ್ಟರಲ್ಲೇ ಮಹೇಂದ್ರ ಮತ್ತು ಮುಕುಂದ್ ಕ್ಯಾಮೆರಾ ತಗೆದುಕೊಂಡು ಫೋಟೋಸ್ ತಗೆಯೋದಕ್ಕೆ ಶುರುವಿಟ್ಟರು..   ನಾವು ಬಿಡ್ತೀವಾ.. Ready  Steady  Go  ಪೋಸ್ ಕೊಟ್ಟಿದ್ದೆ ಕೊಟ್ಟಿದ್ದು... 
ಸುಮಾರು ರಾತ್ರಿ 7:15 ಕ್ಕೆ  ಟ್ರೈನ್ ಕ್ರಾಸಿಂಗ್ ಇರೋದ್ರಿಂದ ನಾವು ಹೋಗುತಿರುವ ಉಗಿ ಬಂಡಿಯು ಹೊನ್ನವಳ್ಳಿ ರೋಡ್ ಹತ್ತಿರ ನಿಲ್ಲಿಸಿತು.. 
ಬಯಸದೆ ಬಂದ  ಭಾಗ್ಯ ಅಂದ್ರೆ ಇದೆ ಅನ್ಸುತ್ತೆ. ಅದು ಹುಣ್ಣಿಮೆಯ ರಾತ್ರಿ ಇರಬಹುದು ರಸಗುಲ್ಲದಂತೆ ಚಂದ ಮಾಮಾ ನಮ್ಮನ್ನೇ ಕೈ ಬೀಸಿ ಕರೆದು ಬೆಳದಿಂಗಳಾಟ ಆಡೋಣ ಬಾ ಎನ್ನುವಂತೆ ತುದಿಗಾಲಲ್ಲಿ ನಮಗಾಗಿ ನಿಂತಿರುವನೆ?  ಹಾಗಿತ್ತು ಅವನ ಪ್ರಕಾಶಮಾನವಾದ ಹೊಳೆವ ಹೆಣ್ಣಿನ ಕಣ್ಣ ಬೆಳಕಿನಂತಿರುವ ಕಿರಣಗಳು..


@Honnavalli Road


@Honnavalli Road

@Honnavalli Road


@Honnavalli Road

ರಾತ್ರಿಯ ಆ ಟ್ರೈನ್ ಟ್ರಾಕ್ ಪಕ್ಕದ ಕಟ್ಟೆ ಮತ್ತು ಆ ಬೆಳ್ಳನೆ ಬೆಣ್ಣೆಯಂತಿರುವ ಬೆಳದಿಂಗಳಲಿ ಕುಳಿತು ಕಡಕ್ ಜೋಳದ ರೊಟ್ಟಿ, ಶೇಂಗಾ ಚಟ್ನಿ,  ಕೆನೆ ಮೊಸರಿನ ಜೊತೆ ಒಂದಿಷ್ಟು ಉಳ್ಳಾಗಡ್ಡಿ ತಿಂತಿದ್ರೆ ಏನಂತೀರಿ ಆ ಮಜಾ. ಹ್ಮ್  ನೆನೆಸಿಕೊಂಡರೆನೆ ಬಾಯಲ್ಲಿ ನೀರು ಬರ್ತಿದೆ.. ಕಲ್ಪನೆಗೂ ಮೀರಿದ್ದು ಆ ಉತ್ತರವ ಕರ್ನಾಟಕ ಬೆಳದಿಂಗಳ ಊಟದ ರುಚಿ. ನಿಮಗೂ ಇದರ ಅನುಭವವಾಗಬೇಕಾದ್ರೆ ಒಂದು ಸಾರಿ ಈ ಬೆಳದಿಂಗಳ ಭೋಜನವನ್ನು ಸವಿದು ನೋಡ್ರಿ.
ಹಾಗೆ ಟ್ರೈನ್ ಪಕ್ಕ, ಟ್ರೈನ್ ಟ್ರಾಕ್ ಹತ್ತಿರ ಕುಳಿತು  ಮತ್ತು ಟ್ರೈನ್ ಎಂಜಿನ್ ಮುಂದೆ ನಿಂತು ಕ್ಯಾಮೆರಾಗೆ ಪೋಸ್ ಕೊಡೋದ್ರೊಳಗೆ ಸಮಯ ಆಗಲೇ ಸುಮಾರು 35 ನಿಮಿಷಗಳಾಗಿತ್ತು.. ಟ್ರೈನ್ ಕ್ರಾಸಿಂಗ್ ಆದಮೇಲೆ ನಮ್ಮ ಉಗಿಬಂಡಿಯು ಕೂಡ ಶಿವಮೊಗ್ಗಾಕ್ಕೆ ಹೊರಡಲು ಸಿಳ್ಳೆ ಹೊಡೆದು  ಹೇಳಿತು ಫೋಟೋಸ್ ಗೆ ಪೋಸ್ ಕೊಟ್ಟಿದ್ದು ಸಾಕು ಬನ್ರೋ ಹೊರಡೋಣ ನಂಗು ತುಂಬಾ ಲೇಟ್ ಆಗಿದೆ. ಟ್ರೈನ್ ಅಲ್ಲಿಂದ ಸುಮಾರು ರಾತ್ರಿ 7.50 ಕ್ಕೆ ಹೊರಟು ರಾತ್ರಿ 11 ಕ್ಕೆ ಶಿವಮೊಗ್ಗ ತಲುಪಿತು. ಅಲ್ಲಿಂದ ಆಟೋ ತಗೆದುಕೊಂಡು ನಂದಿನಿ ಹೋಟೆಲ್ ಗೆ ಹೊಗೊದ್ರೊಳ್ಗೆ  ಲಕ್ಷ್ಮಿನಾರಾಯಣ ಊಟದ ವ್ಯವಸ್ಥೆ ಮಾಡಿಸಿದ್ದ .. ಕೆಲವೊಬ್ಬರು ನಾನ್ ವೆಜ್ ಮತ್ತು ಇನ್ನುಳಿದವರು ಸಸ್ಯಹಾರಿ ಭೋಜನ ಮಾಡಿ ಪಕ್ಕದಲ್ಲೇ ಇರೋ MG ಪ್ಯಾಲೇಸ್ ಲಾಜು ಸೇರಿದೆವು... 

ದಿನ - 2:

ಶನಿವಾರ ಬೆಳಿಗ್ಗೆ ಬೇಗನೆ ಎದ್ದು ಕೆಲವೊಬ್ಬರು ರೆಡಿ ಆಗಿದ್ರು, ಇನ್ನು ಕೆಲವೊಂದಿಷ್ಟು ಜನ ಇನ್ನೂ  ಆ  ಬೆಳಗಿನ ಜಾವದ ಕನಸು ಕಾಣೋ ಮೂಡಿನಲ್ಲಿದ್ದರು.. ಹೇಳಿ ಕೇಳಿ ಅದು ಮಲೆನಾಡ ತಣ್ಣನೆ ಸುಮದುರ ವಾತಾವರಣ. ಪ್ರಕೃತಿಯ ನ್ಯಾಚುರಲ್ A/C ಏನಾದರು ಹಾಕಿದ್ದಾರಾ ಅನ್ನೋ ಹಾಗಿತ್ತು.
ಅಂತು ಇಂತೂ ಬೆಳಗಿನ ಜಾವದ ಸಕಲ ಕಾರ್ಯಗಳನ್ನು ಮುಗಿಸಿಕೊಂಡು ಸುಮಾರು 7:25 ಕ್ಕೆ ಮೊದಲೇ ಬುಕಿಂಗ್ ಮಾಡಿರುವ ಸ್ವರಾಜ್ ಮಾಜ್ದ ಬಸ್ ಹತ್ತಿ  ಹೊರಡಲು ಸಿದ್ದರಾದೆವು..
ಪ್ರತಿಮಾ, ರಮ್ಯಾ ಮತ್ತು ಸೌಮ್ಯ ಸೀರೆ ತೊಟ್ಟು ರೆಡಿ ಆಗಿದ್ರು.. ನಮ್ಮ ಅಪ್ಪಟ ಭಾರತೀಯ ಸಂಸ್ಕೃತಿಗೆ ಹೇಳಿ ಮಾಡಿಸಿದಂತೆ ಹೊಳೆವ ಗೊಂಬೆಗಳಂತೆ ಕಾಣುತಿದ್ದರು.
ಹಾಗೆ ಸೀರೆಯ ನಾರಿಯರು ಒಂದಿಷ್ಟು ಫೋಟೋಸ್ ಗೆ ಪೋಸ್ ಕೊಟ್ಟು ಎರಡನೆಯ ದಿನದ ಪ್ರವಾಸ ಅಲ್ಲಿಂದ ಶುರುವಾಯಿತು. 

ಅಪ್ಪಟ ಭಾರತೀಯ ನಾರಿಯರು


ಅಲ್ಲಿಂದ ಹೊರಟು ಬೆಳಿಗ್ಗೆ ಸುಮಾರು 8:15 ಕ್ಕೆ ಗಾಜನೂರಿನಲ್ಲಿರುವ ತುಂಗಾ ಡ್ಯಾಮ್ ಗೆ ಹೋಗಿ ಒಂದಿಷ್ಟು ಫೋಟೋಸ್ ತಗೆದುಕೊಂಡು ಅಲ್ಲೇ ಹತ್ತಿರವಿರುವ ಸಕ್ರೆಬೈಲು ಆನೆ ಬಿಡಾರಕ್ಕೆ ಹೋಗಿ ಆನೆಗಳಿಗೆ ಸ್ನಾನ ಮಾಡಿಸುವದನ್ನು ನೋಡುತ ಮತ್ತೆ ಒಂದಿಷ್ಟು ಫೋಟೋಸ್ ಗೆ ಪೋಸ್ ಕೊಟ್ಟೆವು. ಆವಾಗಲೇ ಸಮಯ ಸುಮಾರು 9:15  ಘಂ. ಹೊಟ್ಟೆ ಬೆಳಗಿನ ತಿಂಡಿಗಾಗಿ ಹಾತೊರೆಯಲು ಶುರುವಿಟ್ಟುಕೊಂಡಿರೋದ್ರಿಂದ  ತೀರ್ಥಹಳ್ಳಿ ಗೆ ಹೋಗಿ ಅಲ್ಲಿ ನಾಷ್ಟ ಮಾಡುವದಾಗಿ ಡಿಸೈಡ್ ಮಾಡಿದ್ರು. ಅಲ್ಲಿಂದ ಪ್ರಕೃತಿಯ ಸೌಂದರ್ಯವನ್ನು ಬಸ್ಸಿನಲ್ಲಿ ಕುಳಿತುಕೊಂಡೆ ಕಿಡಕಿಗಳ ಮೂಲಕ ನೋಡುತ ತೀರ್ಥಹಳ್ಳಿ  ಕಡೆಗೆ ಸಾಗಿತು ನಮ್ಮ ಪಯಣ. 
@ Upper Tunga Project Dam

@ Upper Tunga Project Dam

@ Upper Tunga Project Dam

ಸಕ್ರೆಬೈಲು

ಸಕ್ರೆಬೈಲು


ಸಕ್ರೆಬೈಲು

ಸಕ್ರೆಬೈಲು

ತೀರ್ಥಹಳ್ಳಿಯಲ್ಲಿರುವ ಹೋಟೆಲ್ ಮಯೂರ ಪ್ಯಾಲೇಸಿನಲ್ಲಿ  ಮಸ್ತ್ ನಾಷ್ಟಾ ಮಾಡಿದಾಗಲೇ ಎಲ್ಲರಿಗೂ ಸ್ವಲ್ಪ ಜಾಸ್ತಿ ಎನರ್ಜಿ ಬಂದಂಗಾಗಿದ್ದು..

ನಾಷ್ಟ ತಗೊಂಡು ಬರ್ರೀ ಪಾ ಹೊಟ್ಟೆ ಹಸಿದು ಸಣ್ಣಗಾಗಿದೆ  


ಇನ್ನು ಎಷ್ಟೊತ್ತು ಕಾಯಬೇಕೋ.. ಜಲ್ದಿ ನಾಷ್ಟಾ ತಗೊಂಡು ಬಾ


ಕಾದು ಕಾದು ಸಾಕಾಯ್ತು ನೋಡು ಮಾರಾಯಾ 



ಅಲ್ಲಿಂದ ಹೊರಟು ನಮ್ಮ ರಾಷ್ಟ್ರ ಕವಿಗಳಾದಂತ ಕುವೆಂಪುರವರ ಹುಟ್ಟೂರಾದ ಕುಪ್ಪಳಿಗೆ ಬೆಳಿಗ್ಗೆ ಸುಮಾರು 11:35 ಕ್ಕೆ ತಲುಪಿದೆವು. 

ಜ್ಞಾನಪೀಠ ಪ್ರಶಸ್ತಿ ವಿಜೆತರಾದಂತ ಕುವೆಂಪುರವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಕರುನಾಡ ಕಂಡ ಕವಿಗಳಲ್ಲಿ ಅವರೊಬ್ಬರು ಮಹಾನ್ ಕವಿಗಳು. ಅವರು ಬರೆದಂತ ಒಂದೆರಡು ಹೆಸರಿಸಲು ಎಂದೂ ಮರೆಯದ ಗೀತೆಗೆ ಉದಾಹರಣೆಯಂದರೆ ನಮ್ಮ ಕರುನಾಡ ನಾಡಗೀತೆ " ಜಯ ಭಾರತ ಜನನಿಯ ತನುಜಾತೆ".. 
ಮತ್ತು
"ಓ ನನ್ನ ಚೇತನ,
ಆಗು ನೀ ಅನಿಕೇತನ"
ಹೀಗೆ ಅವರು ಬರೆದ ಹಾಡುಗಳು, ಕಾದಂಬರಿಗಳು ಮತ್ತು ನಾಟಕಗಳನ್ನು ಹೆಸರಿಸಲು ಕುಳಿತರೆ ಒಂದು ದಿನ ಸಾಲದು ಅನಿಸುತ್ತೆ. 
ಕುಪ್ಪಳ್ಳಿಯಲ್ಲಿರುವ ಅವರ ಮನೆಯ ಬಗ್ಗೆ ಒಂದೆರಡು ಮಾತುಗಳು ಹೆಚ್ಚಿಗೆ ಹೇಳಲು ನನ್ನ ಮನಸ್ಸು ಬಯಸುತ್ತಿದೆ. ಅದೊಂದು ಸುಂದರವಾದ ಮನೆ.
ತಾಯಿಯ ಲಾಲಿ ಹಾಡಿಗೆ ಹೇಗೆ ಮಗು ತನ್ನ ನೋವನ್ನೇ ಮರೆತು ಹಾಯಾಗಿ ನಿದ್ರಿಸುತ್ತದೆಯೋ, ಹಾಗೆ ಈ ಮನೆಯಲಿ ನೀವೊಮ್ಮೆ ಕಾಲಿಟ್ಟರೆ ಆ ಸುಂದರ ರಸಮಯ ಕಾವ್ಯಗಳ ಪ್ರಕೃತಿಯ ಮಡಿಲಲ್ಲಿ ಜಾರುತ್ತಿದ್ದೆವೇನೋ ಎಂದೆನಿಸದೆ ಇರದು...
ನಮ್ಮಲ್ಲಿ ಕೆಲವೊಬ್ಬರಂತು ಯಾಕೆ ನನ್ನ ಬಾಲ್ಯದ ಜೀವನವನ್ನ ಇಂತಹ  ಮನೆಯಲ್ಲಿ ಕಳೆದಿರಬಾರದು ಅಂತ ಹಾಗೆ ಬಾಲ್ಯದ ಆ ತುಂಟಾಟಗಳನ್ನ ಈ ಮನೆಯಲ್ಲಿಯೇ ಕಳಿತಿರುವ ಹಾಗೆ ಕಲ್ಪನೆಯ ಲೋಕಕ್ಕೆ ಹೋಗಿ ಬಂದರು. .. ಈ ಮನೆಯ ಬಗ್ಗೆ ಹೇಳಲು ಒಂದೆರಡು ಮಾತುಗಳು ಸಾಲದು.. 
ಇದೊಂದು ಅತ್ಯಧ್ಬುತಗಳಲ್ಲೊಂದು ಸುಂದರವಾದ ಮತ್ತು ಆ ಮಲೆನಾಡ ಮಡಿಲಲಿ ಹೊಳೆವ ನಕ್ಷತ್ರದಂತೆ. 
ಕುವೆಂಪುರವರು ಕವಿತೆಗಳನ್ನು ಬರೆಯಲು ಕುಲಿತುಕೊಳ್ಳುತ್ತಿರುವ ಆ ಏಕಾಗ್ರತೆಯ ಜಾಗ ನೋಡಿದರೆ.. ನಿಮಗೆ ಅರಿವಿಲ್ಲದೆಯೇ ನೀವು ಕುವೆಂಪುರವರನ್ನ ಕಣ್ಣ ಮುಂದೆ ಕಾಣಬಹುದು. ಅಂತಹ ಸುತ್ತಲು ಹಸಿರು ತೋರಣಗಳಿಂದ ಕೂಡಿರುವ  ಪ್ರಶಾಂತವಾದ ಏಕಾಗ್ರತೆಗೆ ಹೇಳಿ ಮಾಡಿಸಿರುವ ಸ್ಥಳವೆನಾ ಇದು ಅನಿಸುತ್ತದೆ. 
ನಿಜ ಹೇಳಬೇಕೆಂದರೆ  ಆ ಮನೆಯಲ್ಲಿತ್ತುರುವ ಪ್ರವಾಸಿಗರ ಅನಿಸಿಕೆ ಪುಸ್ತಕದಲ್ಲಿ ನಮ್ಮ ಗುಂಪಿನಲ್ಲಿರುವ ಸ್ವಲ್ಪ ಜನರು ಕವಿತೆಗಳನ್ನ ಬರೆದರು....!!!!


ದ. ರಾ. ಬೇಂದ್ರೆಯವರೊಂದಿಗೆ ಕುವೆಂಪು







ಕುವೆಂಪುರವರ ಮನೆ 


ಕುವೆಂಪುರವರ ಮನೆ 


ಕುವೆಂಪುರವರ ಮನೆ 


ಕುವೆಂಪುರವರ ಮನೆ 


ಕುವೆಂಪುರವರ ಮನೆ 


ಕುವೆಂಪುರವರ ಮನೆಯ ಅಂದಕ್ಕ ಮಾರುಹೋಗಿ ಗೌಡ್ರು ಕವಿಯಾಗಿರೋ ಸಮಯ


ಕುವೆಂಪುರವರ ಮನೆ 


ಕುವೆಂಪುರವರ ಮನೆ 

ಎಲ್ಲರೂ ಆ ಮನೆಯ ಸೌಂದರ್ಯಕ್ಕೆ ಮಾರುಹೋಗಿ ಸ್ವರ್ಗ ಲೋಕದಲ್ಲಿರುವಾಗಲೇ ನಮ್ಮ ಪ್ರವಾಸ ವ್ಯವಸ್ಥಾಪಕರಿಂದ ಕರೆ ಘಂಟೆಯೊಂದು  ಬರಬೇಕೆ... "ತುಂಬಾ ಲೇಟಾಗುತ್ತಿದೆ ನಡೀರಿ ಇನ್ನೂ ತುಂಬಾ ಸ್ಥಳಗಳನ್ನ ನೋಡುವದಿದೆ. ಇಲ್ಲದಿದ್ದರೆ ಶ್ರಿಂಗೇರಿ ಗೆ ಹೋಗಲು ಆಗೋದಿಲ್ಲ"...!!!!!
ಏನ್ ಮಾಡೋದು ರವಿ ಮದುವೆಗೆ ಹೋಗಬೇಕು ಮತ್ತು  ಶ್ರಿಂಗೇರಿ ಗೆ ಕೂಡ ಹೋಗಬೇಕು, ಅಲ್ಲಿಂದ ಬರಲು ಒಲ್ಲದ ಮತ್ತು ಭಾರವಾದ ಮನಸ್ಸಿಂದ  ಕವಿಲು ಹೊಳೆಗೆ ಸಾಗಿತು ನಮ್ಮ ಪ್ರಯಾಣ.. 
ಈ ಕವಿಲುಹೊಳೆ ಅಂದರೆ ದಟ್ಟವಾದ ಕಾಡ ಮದ್ಯ ಒಂದು ಸುಂದರವಾದ ಮನೆ ಮತ್ತು ಆ ಮನೆಯ ಪಕ್ಕದಲ್ಲಿ ಕವಿಲೊಡೆದು ಹೋಗುತಿರುವ ಗಂಗೆ.. ಈ ಕವಿಲೊಡೆದು ದುಮ್ಮುಕ್ಕುತಿರುವ ಗಂಗೆಯ ಸೋಭಾಗಿಗೆ ಮಾರುಹೋಗಿ ಸ್ಥಳಕ್ಕೆ ಕವಿಲುಹೊಳೆ ಅಂತರ ಹೆಸರು ಬಂದಿರಬಹುದು ಅಂತನಿಸುತ್ತೆ. ಇದು ಇರೋದು ಶ್ರಿಂಗೇರಿಯಿಂದ ಸುಮಾರು 30Km ದೂರದಲ್ಲಿ.  

ಅಂತು ಇಂತೂ ಕೈಯಲ್ಲಿ ಮ್ಯಾಪಿದ್ದರು ಆ ಕಾಡಲ್ಲಿ ತಿರುವಗಳ ತಿರುವಲ್ಲಿ ಕಳೆದುಕೊಂಡು ಕಷ್ಟಪಟ್ಟು ಸುಮಾರು ಮ. 3ಕ್ಕೆ ರವಿ ಮನೆ ಸೇರಿದೆವು. 

"ಹೃದಯಗಳ ಮಿಡಿತವೊಂದಾಗಿ, 
ಸ್ವರಗಳ ದನಿಯೊಂದಾಗಿ,
ಜೀವಗಳೆರಡರ ಕನಸೊಂದಾಗಿ,
ನವ ಜೀವನಕ್ಕೆ ಕಾಲಿಟ್ಟಿರುವ, 
ಈ ನವ ಜೋಡಿಗೆ ನಮ್ಮ ಶುಭ ಹಾರೈಕೆಗಳು"

ಎಲ್ಲರೂ ನವ ದಂಪತಿಗೆ ಶುಭ ಹಾರೈಕೆಗಳನ್ನ ಹೇಳಿ, ಅಲ್ಲೇ ಸ್ವಲ್ಪ ಸಮಯದ ನಂತರ ಮಸ್ತ್ ಮೃಷ್ಟಾನ್ನ ಭೋಜನ ಮಾಡಿದೆವು. 

ನವದಂಪತಿಗಳಿಗೆ ಶುಭಕೋರಿ

ಈ ಊಟದ  ಬಗ್ಗೆ ಹೇಳದೆ ಹೋದರೆ ನಾನು ಬರೆದಿರೋ ಈ ಬ್ಲಾಗ್ ವ್ಯರ್ಥವಾಗುತ್ತೆ...!!!!
ಏನಪಾ  ಅಂತ ಸ್ಪೆಷಲ್ ಈ ಊಟದಲ್ಲಿ ಅಂತೀರಾ?
ಹೌದು ಈ ಊಟ ಅಂದರೆ ಅದೊಂದು ತರಾ ತಿನ್ನುತಿದ್ದರೆ ಇನ್ನು ತಿನ್ನುತಲೇ ಇರಬೇಕೆನಿಸುವ ಊಟ.. 
ಏನಪಾ ಇವನು ಇಷ್ಟೊಂದು ಹೋಗಲಾಕತ್ತಾನ ಈ ಊಟದ ಬಗ್ಗೆ ಅನ್ತಾದೆನಿದೆ ಅದರಲ್ಲಿ ಏನಾರ ಅಮೃತ ಗಿಮೃತ ಕೊಟ್ಟಾರೇನೂ?

ಮೃಷ್ಟಾನ್ನ ಭೋಜನದ ಸಮಯ

ನಮ್ಮೊರ ಕಡೆಯಂಗೆ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ಜೊತೆ ಶೇಂಗ ಚಟ್ನಿ ಮತ್ತು ಕೆನೆ ಮೊಸರಿನ ಊಟ ಅಥವಾ ಹಬ್ಬಕ್ಕೆ ಮಾಡಿದ ಹಾಗೆ ಹೂರಣದ ಹೋಳಿಗೆ ಜೊತೆ ತುಪ್ಪ ಮತ್ತು ಹಾಲು ಅನ್ಕೊಂಡ್ರ?  ಅದೂ ಅಲ್ಲಾರೀ .. 
ಇಲ್ಲಿ ಮಾಡಿರೋದು ಎಲ್ಲ ತಿಂಡಿಗಳು ಅಕ್ಕಿಯಿಂದ(rice) ಮಾತ್ರ. 
ವೈಟ್ ರೈಸ್, ಅದೇ ರೈಸಿಗೆ ಮತ್ತೆ ಕೆಲವೊಂದು ಅದು ಇದು ಹಾಕಿ ಮಸ್ತ್ ವಿದ ವಿಧವಾದ ರೈಸ್ ತಿಂಡಿಗಳು .  ( ಇಲ್ಲಿ ನಾನು ಅಡುಗೆಯಲ್ಲಿ ಅದು ಇದು ಹಾಕಿದ್ದಾರೆ ಅಂತ ಹೇಳಿದಿನಿ, ಆದರೆ ಅದು ಇದು ಅಂದರೆ ಏನ್ ಅಂತ ನಂಗೂ  ಗೊತ್ತಿಲ್ಲ. ರವಿ ಊರಿಂದ ಬೆಂಗಳೂರಿಗೆ ಬಂದಮೇಲೆ ಕೇಳಿ ಹೇಳ್ತೀನಿ..!!! )
ಮೊದಲನೇ ಸರತಿಗೆ ವೈಟ್ ರೈಸ್ ಹಾಕಿದರು, ಎರಡನೆ ಸರತಿಗೆ ಮತ್ತೊಂದು ವಿಧವಾದ ರೈಸ್, ಮೂರನೇ ಸರತಿಗೆ ಇನ್ನೊಂದು ಬಗೆಯ ರೈಸ್.. ಯೆಪ್ಪಾ....  ಮಾರಾಯ ಏನಿದು ಒಂದಾದ ಮೇಲೊಂದು ಕಹಾನಿ ಮೇ ಟ್ವಿಸ್ಟ್ ಅನ್ನೋ ಹಾಂಗ  ಹೆಸರು ಗೊತ್ತಿಲ್ದೆ ಇರೋ ರೈಸ್ ಐಟೆಮ್ಸ ಎಲ್ಲ ಬರ್ತಿದೆ.. ಆದರೆ ಅದೆಲ್ಲ ತಿಂಡಿಗಳು ಎಲೆಯಲ್ಲಿ ಒಂದಗಳು ಬಿಡಲು ಮನಸೇ ಬರುತಿರಲಿಲ್ಲ.. ನಮ್ಮಲ್ಲೋಬ್ಬನು ಕೇಳಿಯೇ ಬಿಟ್ಟ ಅಣ್ಣ ಇನ್ನು ಎಷ್ಟು ರೌಂಡ್ ಹಿಂಗೆ surprise  ಕೊಡ್ತೀ  ಪಾ.. ಇರೋದೊಂದೇ ಹೊಟ್ಟೆ ಬಿಟ್ಟು ಹೋಗೋಕೆ ಮನಸಿಲ್ಲ ನೀ ನೋಡಿರ ಹಂಗೆ ಒಂದಾದ ಮೇಲೊಂದರಂತೆ ತಗೊಂಡು ಬರ್ತಾನೆ ಇದ್ದೀಯ.. ಇನ್ನ ಬಾಳಷ್ಟು Suprises ಇದ್ದರೆ ಹಂಗೆ ಒಂದಿಷ್ಟು ಪಾರ್ಸೆಲ್ ಮಾಡಿಬಿಡು ಮಾರಾಯಾ ಬೆಂಗಳೂರಿಗೆ ಹೋಗಿ ಜೈ ಅನಿಸಿಬಿಡ್ತೀವಿ... :) ಅಂತು ಹೊಟ್ಟೆಗೂ ನಾಲ್ಕು ದಿನವಾದರೂ ಕರಗದಷ್ಟು ಊಟವಾಯಿತು.. 
ರವಿ ಮನೆ ಹತ್ತಿರವೇ ಇರೋ ಕವಿಲು ಹೊಳೆ ನೋಡೋಣ ಅಂತ  ಹೋದೆವು ಆದರೆ ಮೇ ತಿಂಗಳು ಮುಗಿಯುತ ಬಂದರೂ ಇನ್ನು ಮಳೆಗಾಳ ಶುರುವಾಗದ ಕಾರಣ ನದಿಯಲ್ಲಿ ಅಷ್ಟೊಂದು ನೀರಿರಲಿಲ್ಲ ಆದರು ಹೋಗಿದ್ದಕ್ಕೆ ನಮಗೇನು ಬೇಜಾರು ಮಾಡಿಸಲ್ಲಿಲ್ಲ ಆ ಕವಿಲು ಹೊಳೆ. 

ದಾರಿ ಬಿಡ್ರಿ ನಮ್ ಶಿವು ಡಾನ್ ಬರ್ತಿದ್ದಾರೆ

ಕವಿಲು ಹೊಳೆ


ಕವಿಲು ಹೊಳೆ


ಕವಿಲು ಹೊಳೆ


ಕವಿಲು ಹೊಳೆ


ಕವಿಲು ಹೊಳೆ


ಕವಿಲು ಹೊಳೆ


ಕವಿಲು ಹೊಳೆ

ಅಲ್ಲೇ ಮತ್ತೊಂದಿಷ್ಟು ಕ್ಯಾಮೆರಾಗೆ ಪೋಸ್ ಕೊಟ್ಟು ರವಿ ದಂಪತಿಗಳಿಗೆ ಮತ್ತೊಮ್ಮೆ ಶುಭಾಶಯಗಳನ್ನು ಹೇಳಿ ಅಲ್ಲಿಂದ ಸಾಯಂಕಾಲ ಸುಮಾರು 4:45 ಕ್ಕೆ ಹೊರಟು ಸಾಯಂಕಾಲ ಸುಮಾರು 6 ಕ್ಕೆ ಶ್ರಿಂಗೇರಿ ಗೆ  ತಲುಪಿದೆವು...  
ಶ್ರಿಂಗೇರಿಯಲಿ ಶಾರದೆಯ ದರ್ಶನ ಪಡೆದು. ಶಿವಮೊಗ್ಗಕ್ಕೆ ಹೋಗಿ ರಾತ್ರಿ 10:10ಕ್ಕೆ  ಬೆಂಗಳೂರಿಗೆ ಹೋಗುವ ರೈಲು ಗಾಡಿ ಹಿಡಿಯಬೇಕಿತ್ತು.  ಶ್ರಿಂಗೇರಿಯಿಂದ  ಶಿವಮೊಗ್ಗ ಇರೋದು ಸುಮಾರು 105 km ದೂರದಲ್ಲಿ.  ಮತ್ತು ಆ ದಾರಿ ಕಾಡಲ್ಲಿ ತುಂಬಾ ತಿರುವುಗಳಿಂದ ಕೂಡಿರೋದ್ರಿಂದ ಜಾಸ್ತಿ ವೇಗವಾಗಿ ಬಸ್ಸು ಹೋಗೋದಿಲ್ಲ ಅಂತ ಬೇಗನೆ ಹೋಗೋದು ಅಂತ ನಿರ್ಣಯ ಮಾಡಿದೆವು.  ಆದ ಕಾರಣ ಶ್ರಿಂಗೇರಿಯಲಿ ತುಂಬಾ ಹೊತ್ತು ವಿಶ್ರಾಂತಿ ಪಡೆಯಲು ಆಗಲಿಲ್ಲ. 


ಶ್ರಿಂಗೇರಿ

ಶ್ರಿಂಗೇರಿ


ಶ್ರಿಂಗೇರಿ



ಶ್ರಿಂಗೇರಿ


ಶ್ರಿಂಗೇರಿ


ಶ್ರಿಂಗೇರಿ


ಶ್ರಿಂಗೇರಿ


ಶ್ರಿಂಗೇರಿ


ನಾವು ತಗೆದ ಹಾಗೆ ಸುಮ್ಮನೆ ಛಾಯ ಚಿತ್ರಗಳು


ನಾವು ತಗೆದ ಹಾಗೆ ಸುಮ್ಮನೆ ಛಾಯ ಚಿತ್ರಗಳು


ನಾವು ತಗೆದ ಹಾಗೆ ಸುಮ್ಮನೆ ಛಾಯ ಚಿತ್ರಗಳು


ಅಲ್ಲಿಂದ 6:30 ಕ್ಕೆ  ಹೊರಟೆವು. 
ಅಲ್ಲಿಂದ ಹೊರಟು 7:30 ಕ್ಕೆ ಕೊಪ್ಪದಲ್ಲಿರುವ ವಸಂತ ವಿಹಾರ ಹೋಟೆಲಿನಲ್ಲಿ ಮಸ್ತ್ ಮಸ್ತ್ ಗೋಲಿ ಬಜ್ಜಿ ಮತ್ತು Coffee/Tea ಕುಡಿದು ಮತ್ತೆ ಶಿವಮೊಗ್ಗದ ಕಡೆ ಸಾಗಿತು ನಮ್ಮ ಪಯಣ.
ಗೋಲಿ ಬಜ್ಜಿ ತಿನ್ನೋ ಸಮಯ


ಗೋಲಿ ಬಜ್ಜಿಗಾಗಿ ಕಾಯುತಿರೆ ಈ ಮನವು


ಸಕ್ಕತ್ ಟೇಸ್ಟ್ ಮಗಾ 


ಶಿವಮೊಗ್ಗ ಇನ್ನು 5km ಇರೋವಾಗ ಸಮಯ 9:05 ಘಂಟೆ. ಒಂದು ನೂರು ಮೀಟರ್ ದೂರ ಹೋಗೋದ್ರೊಳಗೆ ಕಾಡಿತ್ತು ನೋಡ್ರಿ ಮತ್ತೊಂದು ಕಹಾನಿ ಮೇ ಟ್ವಿಸ್ಟ್. ಅದೇನು ಅಂತ ಯಾಕ್ ಕೇಳ್ತೀರಿ ಪಾ.. ಯಾವದೋ ಒಬ್ಬ ದೊಡ್ಡ ರಾಜಕೀಯ ಮಹಾರಾಯನ ಮಗಳ ಮದುವೆ ಇರೋದ್ರಿಂದ ತುಂಬಾ ಜನ ರಾಜಕೀಯ ದೊಡ್ಡ ಪಂಡಿತರ ಗುಂಪೇ ಅಲ್ಲಿ ಸೇರಿತ್ತು.. ಸೆರಿದರು ಸರಿ ಅದರಿಂದ ನಿನಗೇನು ಆಗೋದು ಅಂತೀರಾ ಅಲ್ಲೇ ಇರೋದು ನೋಡ್ರಿ ಅಸಲಿ ವಿಷಯ.. ಈ ಎಲ್ಲಾ ಮಹಾನುಭಾವರು ಏನು ಮಾಡಿದ್ದರು ಗೊತ್ತೇನ್ರೀ..,
ಕಾರುಗಳನ್ನ ರಸ್ತೆ ಮೇಲೆ ನಿಲ್ಲಿಸಿದ್ದರು.. ಹೋಗೋರು ಹೊಗೊಕಾಗಲ್ಲ ಬರೋರು ಬರೊಕ್ಕಾಗಲ್ಲ.. ಒಂದು ಅಂದರೆ ಒಂದೇ ಗಾಡಿ ಮಾತ್ರ ಹೋಗೋವಷ್ಟು ದಾರಿ ಬಿಟ್ಟಿದ್ದಾರೆ.. ಸುಮಾರು ಒಂದೂವರೆ ಕಿಲೋಮಿಟರಷ್ಟು ಜಾಮ್ ಆಗಿದೆ.. ಬಸ್ಸು ಬೇರೆ ಮುಂದೆ ಸಾಗುತ್ತಿಲ್ಲ, ಕೈಯಲ್ಲಿರೋ ಗಡಿಯಾರ ಬೇರೆ ಕೂಗಿ ಕೂಗಿ ಹೆಲಿತಿದೆ ಕೌಂಟ್ ಡೌನ್ ಸ್ಟಾರ್ಟೆಡ್.. ಕೌಂಟ್ ಡೌನ್ ಸ್ಟಾರ್ಟೆಡ್... !!!! ಏನ್ ಮಾಡಿದರು ಗಾಡಿ ಮುಂದೆ ಒಂದು ಹೆಜ್ಜೆಯಷ್ಟು ಹೋಗುತ್ತಿಲ್ಲ..  
ಇಷ್ಟೆಲ್ಲಾ ಆಗೋದರೊಳಗೆ ಸಮಯ 9:45 ಘಂ.. ಇದು ಹಿಂಗಾದರೆ ಅಷ್ಟೇ ನಾವು ಟ್ರೈನ್ ಟೈಮಿಗೆ ಸ್ಟೇಷನ್ ಗೆ ಹೊಗೊಕಾಗಲ್ಲ. 
ಹಿಂಗೆ ಆದ್ರೆ ಇದು ಸರಿಯಾಗೋದಿಲ್ಲ ಅಂತ ನಾವೇ ಟ್ರಾಫಿಕ್ ನಿಭಾಯಿಸೋಣ ಅಂತ ಬಸ್ಸಿಂದ ಇಳಿದು ಹೋಗಿ ಹರಸಾಹಸ ಮಾಡಿ ರಸ್ತೆ ಮೇಲಿರುವ ಕಾರ್ ಗಳನ್ನ ರಸ್ತೆ ಪಕ್ಕಕ್ಕೆ ಜಂಟಿ ಪೈಲ್ವಾನರ ಹಾಗೆ ತಳ್ಳಿದೆವು... 
ಅಲ್ಲಿಂದ ಹಾಗೋ ಹೀಗೋ  ಮಾಡಿ ಪಾರಾಗಿ ನಾವು ರಾತ್ರಿ ತಂಗಿರೋ ಲಾಜಿಗೆ ಬರೋದ್ರೊಳಗೆ ಸಮಯ ರಾತ್ರಿ 9:55 ಘಂಟೆ...!!!
ಇನ್ನು ಉಳಿದಿರೋದು ಬರೀ 15  ನಿಮಿಷಗಳು ಮಾತ್ರ... ಎಲ್ಲರೂ ಬಸ್ಸಿಂದ ಇಳಿದು ಲಾಜಿಗೆ ಹೋಗಿ ನಮ್ಮ ನಮ್ಮ ಬ್ಯಾಗುಗಳನ್ನ ತಂದರೆ ಪಕ್ಕಾ ಟ್ರೈನ್ ಮಿಸ್ ಮಾಡ್ಕೋತೀವಿ.. ಆದ್ದರಿಂದ ಒಂದು ರೂಮಿಗೆ ಒಬ್ಬರಂತೆ ಹೋಗಿ ಉಳಿದವರ ಬ್ಯಾಗುಗಳನ್ನ ತಗೊಂಡು ಬಂದರೆ ಬೇಗ ಬರಬಹುದು ಅಂತ ಒಬ್ಬೊಬ್ಬರು ಹೋದೆವು. ಅಂದುಕೊಂಡಂತೆ  ಎಲ್ಲರೂ ಬ್ಯಾಗುಗಳನ್ನ ತಗೊಂಡು ಬಂದರು..  ಆವಾಗ ಸಮಯ 10:03 ಘಂಟೆ..  ಎಲ್ಲರೂ ಬಂದ್ರಾ ಅಂತ ನೋಡಿಕೊಂಡು ಹೊರಡೋಣ ಅನ್ನೋದ್ರೊಳಗೆ "ಯೂಸುಫ್ ಅಲಿ" ಕಾಣಿಸುತ್ತಿಲ್ಲ.. ಏನಿದು ಇಂತಹ ಸಮಯದಲ್ಲಿ ಇವನೆಲ್ಲಿಗೆ ಹೋಗಿದ್ದಾನೆ ಅಂತ ಫೋನ್ ಮಾಡಿದ್ರೆ ಅವ್ನು ಮಾತ್ರ ಇನ್ನು ಲಾಜಿನಲಿ ಹಾಯಾಗಿ ವಿಶ್ರಾಂತಿ ತಗೆದುಕೊಳ್ಳೋ ಮೂಡಿನಲಿದ್ದಾನೆ...!!!
ಇನ್ನೇನು ಮಾಡ್ತೀರ ಅವನನ್ನ ಲಕ್ಷ್ಮಿ  ಜೊತೆ ಆಮೇಲೆ ಅವನ ಕಾರಲ್ಲಿ ಬರಲಿ ಉಳಿದವರೆಲ್ಲ ಹೋಗೋಣ ಅಂತ ಅಲ್ಲಿಂದ ಸ್ಟೇಷನ್ ಗೆ ಹೊರಟೆವು.. 
ಮತ್ತೆ ಟ್ರಿಪ್ ಮೇ ಟ್ವಿಸ್ಟ್ ಆಗಯಾ..!!!... ನಾವು ಸ್ಟೇಷನ್ ತಲುಪೋದ್ರೊಳಗೆ ಯೂಸುಫ್ ಆಟೋದಲ್ಲಿ ನಮಗಿಂತ ಮುಂದೆ ಬಂದಿದ್ದಾನೆ.. .. ಹಂಗೆ ಹಿಂಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್  ಅನ್ಕೊಂಡು ಇನ್ನು 3 ನಿಮಿಷಗಳಿರೋದ್ರೊಳಗೆ ಸ್ಟೇಷನ್ ಗೆ ಬಂದು ನಮ್ಮ ನಮ್ಮ ಆಸನಗಳಲ್ಲಿ ಆಸೀನರಾದೆವು.. 
ರಾತ್ರಿ ಊಟಕ್ಕೆ ಅಂತ ನಾವು ಬರುವ ಮೊದಲೇ ಲಕ್ಷ್ಮಿ ಎಲ್ಲರಿಗೂ ಊಟಾನಾ ಪಾರ್ಸೆಲ್ ಮಾಡಿಸಿದ್ದ..:)
ಅಲ್ಲಿಂದ ರಾತ್ರಿ 10:10 ಕ್ಕೆ ಹೊರಟು ಮಾರನೆಯ ದಿನ ಬೆಳಗಿನ ಜಾವ 4:30 ಕ್ಕೆ ಬೆಂಗಳೂರು ತಲುಪಿದೆವು.. .... 
ಮತ್ತೊಂದು ಪ್ರವಾಸ ಪೂರ್ಣಗೊಳಿಸಿದ ಸಂಬ್ರಮದಲ್ಲಿ ಒಬ್ಬರಿಗೊಬ್ಬರು ಶುಭಾಶಯಗಳನ್ನ ಹೇಳಿ ತಮ್ಮ ತಮ್ಮ ಗೂಡಿಗೆ ಮರಳಿದರು... 


ಕೃತಜ್ಞತೆಗಳು:-
ರಾಜೇಶ್, ಶಿವರಾಜು ಮತ್ತು ಲಕ್ಷ್ಮಿನಾರಾಯಣ    ( ಪ್ರವಾಸ ವ್ಯವಸ್ತಾಪಕರು )
ಮತ್ತು ಈ ಪ್ರವಾಸದಲ್ಲಿ ಭಾಗವಹಿಸಿದ ಎಲ್ಲ ನನ್ನ ಗೆಳೆಯ ಗೆಳತಿಯರಾದ   (ಶ್ರೀನಿವಾಸ್ ಬೆಳ್ಳಾರಿ, ಮಹೇಂದ್ರ ಕುಮಾರ್, ಮುಕುಂದ, ಶ್ರೀನಿವಾಸ್ KN, ಲಕ್ಷಿನಾರಾಯಣ 2 , ವೀರೇಶ್ ಹಿರೇಮಠ, ಮಾಧುರಿ, ಪ್ರತಿಮಾ, ರಮ್ಯಾ, ಸೌಮ್ಯ, ದೊರೈ, ಸುಭಾಸ್, ಯೂಸುಫ್ ಅಲಿ, ಲೋಕೇಶ್, ಗಿರಿಧರ Y, ಚಂದ್ರಗಿರಿ  ಮತ್ತು  ಆದಿತ್ಯ)


....ಸಲಹೆ ಸೂಚನೆಗಳನ್ನು  ಹೃತ್ಪೂರ್ವಕವಾಗಿ ಸ್ವೀಕರಿಸುತ್ತೇನೆ .....